ಬೆಂಗಳೂರು, ಡಿ.12 (DaijiworldNews/PY): ಶನಿವಾರವೂ ಕೂಡಾ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಬಸ್ಗಳ ಸಂಚಾರ ಸ್ಥಗಿತಗೊಳಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಪ್ರತಿಭಟನೆಯ ನಡುವೆಯೂ ಕೂಡಾ ಕೆಎಸ್ಆರ್ಟಿಸಿಯ 93 ಹಾಗೂ ಬಿಎಂಟಿಸಿಯ 55 ಬಸ್ಗಳು ಕಾರ್ಯಾಚರಣೆ ನಡೆಸಿವೆ.
"ಮಂಗಳೂರು ವಿಭಾಗದಿಂದ 87, ದಾವಣಗೆರೆ 2, ಶಿವಮೊಗ್ಗದಲ್ಲಿ 3 ಹಾಗೂ ಚಿತ್ರದುರ್ಗದಿಂದ ಒಂದು ಬಸ್ ಕಾರ್ಯಾಚರಣೆ ಪ್ರಾರಂಭಿಸಿದ್ದು, ಬೆಳಗ್ಗೆ 8 ಗಂಟೆಯವರೆಗೆ ಉಳಿದ ವಿಭಾಗಗಳಲ್ಲಿ ಯಾವುದೇ ಬಸ್ ಕೂಡಾ ಕಾರ್ಯಾಚರಣೆ ನಡೆಸಿಲ್ಲ" ಎಂದು ಕೆಎಸ್ಆರ್ಟಿಸಿ ಹೇಳಿದೆ.
"ಮುಷ್ಕರವನ್ನು ವಿರೋಧಿಸುತ್ತಿರುವ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದು, ಇವರೊಂದಿಗೆ ನಿರ್ವಾಹಕ ಹಾಗೂ ಚಾಲಕ ಹುದ್ದೆಯಿಂದ ಟಿ.ಸಿ. ಹುದ್ದೆಗೆ ಭಡ್ತಿ ಹೊಂದಿರುವವರನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಭಟನಾನಿರತ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದು, "ಅಧಿಕಾರಿಗಳು ಖಾಸಗಿ ಚಾಲಕರನ್ನು ಕರೆತಂದು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ನೌಕರರೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಬದಲು ಸರ್ಕಾರ ಬೇರೆ ಹಾದಿ ಹಿಡಿದಿದೆ. ಒಂದು ವೇಳೆ ಖಾಸಗಿ ಚಾಲಕರಿಂದ ಅಪಘಾತ ಸಂಭವಿಸಿ ಸಾವು, ನೋವಾದಲ್ಲಿ ಇದಕ್ಕೆ ಸರ್ಕಾರವೆ ಹೊಣೆ" ಎಂದಿದ್ದಾರೆ.