ಬಂಟ್ವಾಳ, ಡಿ. 11 (DaijiworldNews/SM): ಮದುವೆ ಹಾಲ್ ಗಳಲ್ಲಿ ಮಕ್ಕಳು, ಮಹಿಳೆಯರ ಕುತ್ತಿಗೆಯಿಂದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಮಹಿಳೆಯೋರ್ವಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಮುಡಿಪು ನಿವಾಸಿ ಫಾತಿಮಾ ಸಹಿನಾಜ್ ಬಂಧಿತ ಆರೋಪಿ.
ಮದುವೆ ಸಮಾರಂಭದಲ್ಲಿ ಮದುವೆ ಹಾಲ್ ಗಳಲ್ಲಿ ಬ್ಯಾಗ್ ನಿಂದ ಹಾಗೂ ಮಕ್ಕಳ ಮತ್ತು ಮಹಿಳೆಯರ ಕುತ್ತಿಗೆ ಕೈ ಹಾಕಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಪೋಲೀಸರು ಬಂಧಿಸಿದ್ದಾರೆ.
ಮದುವೆ ಹಾಲ್ ಗಳಲ್ಲಿರುವ ಸಿ.ಸಿ.ಟಿವಿ ಪೂಟೇಜ್ ನಲ್ಲಿ ಕಳ್ಳತನ ಮಾಡುವ ದೃಶ್ಯ ಸೆರೆಯಾಗಿದೆ. ಈ ಬಗ್ಗೆ ಹಾಲ್ ಗಳ ಮಾಲಕರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ಗುರುವಾರ ಪಾಣೆಮಂಗಳೂರು ಎಸ್.ಎಸ್.ಆಡಿಟೋರಿಯಂ ಹಾಲ್ ನಲ್ಲಿ ಈ ಮಹಿಳೆ ಹೆಣ್ಣು ಮಗುವೊಂದರ ಕುತ್ತಿಗೆಯಿಂದ ಸರ ಎಗರಿಸಲು ಪ್ರಯತ್ನಿಸಿದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಕೇವಲ ಮಹಿಳೆಯರ ಬ್ಯಾಗ್ ಅಥವ ಕುತ್ತಿಗೆ ಮತ್ತು ಹೆಚ್ಚಾಗಿ ಮಕ್ಕಳ ಕುತ್ತಿಗೆಯ ಮೇಲೆ ಇವಳ ಕಣ್ಣಿಟ್ಟಿರುತ್ತಾಳೆ. ಮಹಿಳೆಯರು ಗುಂಪಾಗಿ ಸೇರುವ ಜಾಗದಲ್ಲಿ ಅಥವಾ ಅವರ ಬ್ಯಾಗ್ ಗಳಿಂದ ಬಂಗಾರ ಕಳವು ಮಾಡುವುದು ಇವಳ ಚಾಳಿಯಾಗಿತ್ತು. ಜೊತೆಗೆ ಮಕ್ಕಳ ಕುತ್ತಿಗೆಯಿಂದ ಕಳವು ಮಾಡುವುದರಲ್ಲಿ ಇವಳು ನಿಸ್ಸೀಮಳಾಗಿದ್ದಳು. ಮಕ್ಕಳು ಮದುವೆ ಸಮಾರಂಭಗಳಲ್ಲಿ ಊಟ ಮಾಡಿ ಕೈ ತೊಳೆಯುವ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಕಳವು ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಗುರುವಾರ ಕೂಡ ಇದೇ ರೀತಿ ಹೆಣ್ಣು ಮಗುವೊಂದು ಊಟ ಮಾಡಿ ಕೈ ತೊಳೆಯುತ್ತಿದ್ದಾಗ ಕುತ್ತಿಗೆಯಿಂದ ಸರ ಎಳೆಯಲು ಪ್ರಯತ್ನಿಸಿದ್ದಾಳೆ. ಸರ ಎಳೆಯುವುದು ಗಮನಕ್ಕೆ ಬಂದ್ದಿದ್ದರಿಂದ ಮಗು ಜೋರಾಗಿ ಕೂಗಾಡಿದೆ. ಹಾಲ್ ನಲ್ಲಿ ಹೆಣ್ಣು ಮಗಳು ಅಳುವುದನ್ನು ನೋಡಿ ವಿಚಾರಿಸಿದಾಗ ಇವಳು ಕಳವಿಗೆ ಪ್ರಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಲ್ಲಾ ವಿಚಾರಗಳನ್ನು ಬಾಯಿ ಬಿಟ್ಟಿದ್ದಾಳೆ.
ಕಳೆದ 10 ವರ್ಷಗಳಿಂದ ಇದೇ ದಂದೆಯಲ್ಲಿ ತೊಡಗಿರುವ ಬಗ್ಗೆ ಈಕೆ ಮಾಹಿತಿ ನೀಡಿದ್ದಾಳೆ. ಎಸ್.ಎಸ್. ಮಹಲ್ ಮದುವೆ ಹಾಲ್ ನಲ್ಲಿ ಮೂರು ಬಾರಿ ಕಳವು ಮಾಡಿದ ಬಗ್ಗೆಯೂ ಒಪ್ಪಿಕೊಂಡಿದ್ದಾಳೆ. ಯಶಸ್ವಿ ಹಾಲ್ ಫರಂಗಿ ಪೇಟೆ, ತೊಕ್ಕೊಟ್ಟು ಯುನಿಟಿ, ತಲಪಾಡಿ ಖಜನಾ ಸೇರಿದಂತೆ ಇತರ ಹಲವು ಕಡೆಗಳಲ್ಲಿ ಕಳವು ಮಾಡಿದ ಬಗ್ಗೆ ಅವಳು ಒಪ್ಪಿಕೊಂಡಿದ್ದಾಳೆ. ಕಳವು ಮಾಡಿದ ಚಿನ್ನಾಭರಣಗಳನ್ನು ಚಿನ್ನದ ಅಂಗಡಿಗೆ ನೀಡಿ ಕರಗಿಸಿ ಹೊಸ ರೂಪ ಮಾಡಿಸಿದ ಸುಮಾರು ೨೩೪ ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.