ನವದೆಹಲಿ, ಡಿ.11 (DaijiworldNews/PY): "ರೈತರ ಬೇಡಿಕೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸಮಯೋಚಿತ ತೀರ್ಮಾನ ತೆಗೆದುಕೊಳ್ಳಬೇಕು" ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.
ಈ ವಿಚಾರವಾಗಿ ಶುಕ್ರವಾರ ಮಾತನಾಡಿದ ಅವರು, "ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ರೈತರ ಬೇಡಿಕೆಗಳ ಬಗ್ಗೆ ಕೇಂದ್ರ ಸೂಕ್ತವಾದ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯು ದೇಶದ ಇತರ ಕಡೆಯೂ ನಡೆಯಬಹುದು" ಎಂದಿದ್ದಾರೆ.
"ವಿರೋಧ ಪಕ್ಷಗಳು ಕೃಷಿ ಮಸೂದೆಗಳ ಬಗ್ಗೆ ಚರ್ಚೆ ನಡೆಸಲು ಒತ್ತಾಯಿಸಿದ್ದರೂ ಕೂಡಾ ಕೇಂದ್ರ ಸರ್ಕಾರ ಒಪ್ಪಿಲ್ಲ. ಅಲ್ಲದೇ ಸಂಸತ್ನಲ್ಲಿ ಮಸೂದೆಗಳನ್ನು ಅವಸರವಾಗಿ ಅಂಗೀಕಾರ ಮಾಡಲಾಯಿತು" ಎಂದು ಆರೋಪಿಸಿದ್ದಾರೆ.
"ರೈತರು ದೇಶದ ಬೆನ್ನೆಲುಬು ಎನ್ನುವುದನ್ನು ನಾವು ಎಂದಿಗೂ ಕೂಡಾ ಮರೆಯಬಾರದು. ಕೇಂದ್ರ ಸರ್ಕಾರ ರೈತರ ತಾಳ್ಮೆಯನ್ನು ಪರೀಕ್ಷಿಸಬಾರದು" ಎಂದು ಹೇಳಿದ್ದಾರೆ.