ಲಕ್ನೋ, ಡಿ.11 (DaijiworldNews/PY): "ರೈತರನ್ನು ಬಿಜೆಪಿ ಸರ್ಕಾರ ಕಡೆಗಣಿಸುತ್ತಿದೆ. ಬಿಜೆಪಿ ಸರ್ಕಾರ ಮೊದಲು ರೈತರ ಮೇಲಿನ ಶೋಷಣೆಯನ್ನು ನಿಲ್ಲಿಸಬೇಕು" ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂತಹ ಚಳಿಯ ಪರಿಸ್ಥಿಯಲ್ಲಿಯೂ ಕೂಡಾ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಸಮರ್ಥನೀಯ ಬೇಡಿಕೆಗಳ ಬಗ್ಗೆ ಹೃದಯರಹಿತ ಮನೋಭಾವವನ್ನು ಅಳವಡಿಸಿಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ಈ ಬಗ್ಗೆ ಜಾಗತಿಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿಶ್ವಾದ್ಯಂತ ಭಾರತದ ಪ್ರಜಾಪ್ರಭುತ್ವದ ಹೆಸರಿಗೆ ಧಕ್ಕೆಯುಂಟಾಗಿದೆ" ಎಂದಿದ್ದಾರೆ.
"ನಮಗೆ ಆಹಾರ ನೀಡುವವರನ್ನು ಕಡೆಗಣಿಸಬೇಡಿ. ಬಿಜೆಪಿ ಸರ್ಕಾರ ಮೊದಲು ರೈತರ ಮೇಲಿನ ಶೋಷಣೆಯನ್ನು ನಿಲ್ಲಿಸಬೇಕು. ರೈತರ ಪ್ರತಿಭಟನೆಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರಳಿ ಸ್ಥಾಪಿಸುವಂತ ಚಳುವಳಿಯಾಗಿದೆ. ರೈತರು ನಮ್ಮ ದೇಶದ ಪ್ರಾಥಮಿಕರು ಎಂಬುದನ್ನು ಮರೆಯಬೇಡಿ" ಎಂದಿದ್ದಾರೆ.