ಹೊಸದಿಲ್ಲಿ, ಡಿ.11 (DaijiworldNews/HR): ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಕನಿಷ್ಠ ಬೆಂಬಲ ಬೆಲೆ ಸಿಗದಿದ್ದಲ್ಲಿ ಮನೋಹರ್ ಲಾಲ್ ಖಟ್ಟರ್ ಸರಕಾರದಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹರ್ಯಾಣದ ಉಪ ಮುಖ್ಯಮಂತ್ರಿ ಹಾಗೂ ಎನ್ಡಿಎ ಮೈತ್ರಿಪಕ್ಷ ಜನನಾಯಕ್ ಜನತಾ ಪಕ್ಷ ನಾಯಕ ದುಷ್ಯಂತ್ ಚೌಟಾಲ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ರೈತರುಗಳಿಗೆ ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ಕುರಿತು ಭರವಸೆ ನೀಡಬೇಕೆಂದು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದು, ಕೇಂದ್ರ ಸರಕಾರವು ಎಂಎಸ್ಪಿ ಸಹಿತ ವಿವಿಧ ವಿಚಾರಗಳಿಗೆ ಸಂಬಂಧಿಸಿ ಲಿಖಿತ ಭರವಸೆಯ ಪ್ರಸ್ತಾವ ನೀಡಿದೆ. ಉಪ ಮುಖ್ಯಮಂತ್ರಿಯಾಗಿರುವ ತನಕ ರೈತರಿಗೆ ಎಂಎಸ್ಪಿ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ಆದರೆ ನನಗೆ ಇದು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡುತ್ತೇನೆ" ಎಂದು ದುಷ್ಯಂತ್ ಸಿಂಗ್ ಹೇಳಿದ್ದಾರೆ.
ಇನ್ನು ಕೇಂದ್ರ ಸರಕಾರ ರೈತರ ಬೇಡಿಕೆಗಳ ಕುರಿತು ಲಿಖಿತ ಭರವಸೆ ನೀಡಿರುವ ಕಾರಣ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯಬಹುದು ಎಂದು ದುಷ್ಯಂತ್ ಚೌಟಾಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.