ಕೋಲ್ಕತ್ತಾ, ಡಿ.11 (DaijiworldNews/PY): ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪಶ್ವಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಖಡ್ ಪ್ರತಿಕ್ರಿಯೆ ನೀಡಿದ್ದು, "ಬೆಂಕಿಯೊಂದಿಗೆ ಆಟ ಆಡುವುದು ಉತ್ತಮವಲ್ಲ" ಎಂದು ಮಮತಾ ಬ್ಯಾನರ್ಜಿ ಅವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಪ್ ಧನ್ಖಡ್ ಅವರು, "ಇದೀಗ ರಾಜ್ಯದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಕೇಂದ್ರಕ್ಕೆ ನನ್ನ ವರದಿ ಕಳುಹಿಸಿದ್ದೇನೆ. ಬೆಂಕಿಯೊಂದಿಗೆ ಆಟ ಆಡುವುದು ಉತ್ತಮವಲ್ಲ" ಎಂದಿದ್ದಾರೆ.
"ಮುಖ್ಯಮಂತ್ರಿಗಳು, ಹೊರಗಿನವರು ಯಾರು, ಒಳಗಿನವರು ಯಾರು ಎನ್ನುವ ಮೊಂಡು ಧೈರ್ಯದಿಂದ ಮೊದಲು ಹಿಂದಕ್ಕೆ ಸರಿಯಬೇಕು. ಮುಖ್ಯಮಂತ್ರಿ ಸಂವಿಧಾನಕ್ಕೆ ಗೌರವ ನೀಡಿ, ಅದೇ ರೀತಿ ನಡೆದುಕೊಳ್ಳಬೇಕು. ಸಿಎಂ ತಮ್ಮ ಜವಾಬ್ದಾರಿಗಳಿಂದ ತಪ್ಪಿಕೊಳ್ಳುವಂತಿಲ್ಲ. ತಮ್ಮ ಜವಾಬ್ದಾರಿಗಳನ್ನು ಮಾಡಲೇ ಬೇಕು. ನಡೆದಿರುವ ಘಟನೆಯ ಬಗ್ಗೆ ಸಿಎಂ ರಾಜ್ಯದ ಜನತೆಯ ಬಳಿ ಕ್ಷಮೆಯಾಚಿಸಬೇಕು" ಎಂದು ಹೇಳಿದ್ದಾರೆ.
ಡಿ.10ರ ಗುರುವಾರದಂದು ಕೋಲ್ಕತ್ತಾದಿಂದ ದಕ್ಷಿಣ 24 ಪರಗಣದ ಡೈಮಂಡ್ ಹಾರ್ಬರ್ಗೆ ತೆರಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಗೃಹಸಚಿವಾಲಯ ಡಿಜಿಪಿ ಸೇರಿದಂತೆ ಘಟನೆಯ ಮಾಹಿತಿ ಕೇಳಿ ಸಮನ್ಸ್ ನೀಡಿದೆ.