ಬೆಳಗಾವಿ,ಡಿ.11 (DaijiworldNews/HR): ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ತಡೆದು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಕೇರಳ ಮೂಲದ ವಾಮದೇವನ್ ಎಂದು ಗುರುತಿಸಲಾಗಿದೆ.
"ರಾಯಬಾಗದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಆರೂವರೆ ತಿಂಗಳಿನಿಂದ ನನಗೆ ಸಂಬಳ ಬಂದಿಲ್ಲ. ವರ್ಗಾವಣೆಯನ್ನೂ ಮಾಡಲಾಗಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಇದರಿಂದ ಜೀವನ ನಿರ್ವಹಣೆಗೆ ಬಹಳ ತೊಂದರೆಯಾಗಿದೆ. ಹೀಗಾಗಿ, ಆತ್ಮಹತ್ಯೆಗೆ ಮುಂದಾದೆ" ಎಂದು ಮಾಧ್ಯಮ ಪ್ರತಿನಿಧಿಗಳಿಗೆ ವಾಮದೇವನ್ ತಿಳಿಸಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಕಚೇರಿ ಡ್ಯೂಟಿಯಲ್ಲಿದ್ದ ಪೊಲೀಸರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದ್ದು, ವ್ಯಕ್ತಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.