ಭೋಪಾಲ್, ಡಿ.11 (DaijiworldNews/MB) : ಒಂದು ಮತ ನೀಡಿ ಮತದಾರರು ನಾಯಕನನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಆದರೆ ಮತಗಳನ್ನು ಸುಲಭವಾಗಿ ಖರೀದಿ ಮಾಡಬಹುದು ಎಂದು ಬಿಜೆಪಿಯ ಲೋಕಸಭಾ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭೋಪಾಲ್ನಲ್ಲಿ ಬುಧವಾರ ಶಾಪಿಂಗ್ ಕಾಂಪ್ಲೆಕ್ಸ್ನ ಅಡಿಪಾಯ ಹಾಕುವ ಸಮಾರಂಭದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಈ ಹೇಳಿಕೆಯನ್ನು ನೀಡಿದ್ದಾರೆ.
ಸಮಾರಂಭದಲ್ಲಿ ಸ್ಥಳೀಯ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಜ್ಞಾ, "ಅಭಿವೃದ್ಧಿ ಜನನಿಧಿಯ ಜವಾಬ್ದಾರಿಯಾಗಿದೆ. ಆದರೆ ಅಕ್ರಮ ಅತಿಕ್ರಮಣಗಳ ವಿರುದ್ಧ ವ್ಯಾಪಾರಿಗಳು ಜಾಗೃತರಾಗಿರಬೇಕು. ಏಕೆಂದರೆ ಈ ದಿನಗಳಲ್ಲಿ ಭೂ ಮಾಫಿಯಾ ಹೆಚ್ಚು ಪ್ರಬಲವಾಗಿದೆ" ಎಂದು ಹೇಳಿದರು.
''ನನಗೆ ಈ ರೀತಿಯ ಸ್ಪಷ್ಟನೆ ಅತೀ ಮುಖ್ಯ ಎಂದು ಅನಿಸುತ್ತದೆ. ಒಂದು ಮತವನ್ನು ನೀಡಿ ಯಾರನ್ನೂ ಕೂಡಾ ಖರೀದಿಸಲು ಸಾಧ್ಯವಿಲ್ಲ. ಆದರೆ ಮತಗಳನ್ನು ಸುಲಭವಾಗಿ ಖರೀದಿಸಬಹುದು'' ಎಂದು ಹೇಳಿದರು.
ಪ್ರಜ್ಞಾ ಸಿಂಗ್ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದ್ದು, "ಈ ಬಿಜೆಪಿ ನಾಯಕಿ ತನ್ನ ವಿವಾದಾತ್ಮಕ ಹೇಳಿಕೆಯಿಂದಲ್ಲೇ ಹೆಸರುವಾಸಿಯಾಗಿದ್ದು ಅವರು ಹೇಳಿಕೆಗಳು ಯಾವಾಗಲೂ ಸಾರ್ವಜನಿಕ ಭಾವನೆಗಳಿಗೆ ವಿರುದ್ದವಾದವು'' ಎಂದು ಹೇಳಿದರು.
''ಅಷ್ಟೇ ಅಲ್ಲದೇ ಬಿಜೆಪಿಯೇ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಸಾರ್ವಜನಿಕವಾಗಿಯೂ ಅವರಿಗೆ ಗೌರವವಿಲ್ಲ'' ಎಂದು ಹೇಳಿದ್ದಾರೆ.