ಬೆಂಗಳೂರು, ಡಿ.11 (DaijiworldNews/MB) : ''ರೈತರ ಬೆಳೆಗೆ ಹಾನಿ ಮಾಡುವ, ಜಮೀನಿನ ಮೇಲೆ ದಾಳಿ ಮಾಡುವ ಕಾಡು ಪ್ರಾಣಿಗಳನ್ನು ಕೊಲ್ಲಲು ಗ್ರಾಮಸ್ಥರಿಗೆ ಸಮ್ಮತಿ ನೀಡಬೇಕು'' ಎಂದು ಬಿಜೆಪಿ ಶಾಸಕ ಅಗರಾ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಚರ್ಚೆ ಸಂದರ್ಭ ಮಾತನಾಡಿದ ಅವರು, ''ಗ್ರಾಮಗಳ ಮೇಲೆ ದಾಳಿ ನಡೆಸುವ ಕಾಡುಪ್ರಾಣಿಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಕಾಡು ಪ್ರಾಣಿಗಳನ್ನು ಕೊಲ್ಲಲು ಶಸ್ತ್ರಾಸ್ತ್ರಗಳನ್ನು ಬಳಸಲು ಸರ್ಕಾರ ಅನುಮತಿ ನೀಡಬೇಕು. ನಾವು ಅವುಗಳನ್ನು ಕೊಂದು ಅವುಗಳನ್ನು ನಿಯಂತ್ರಣಕ್ಕೆ ತರುತ್ತೇವೆ'' ಎಂದು ಹೇಳಿದರು.
''ಮಳೆ ನಾಡು ಪ್ರದೇಶದಲ್ಲಿ ಹಲವು ವರ್ಷಗಳಿಂದ ಆನೆಗಳ ಹಾವಳಿ ಇದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಆ ಆನೆಗಳ ದಿಂಡು ಹಾಳುಗೆಡವುತ್ತದೆ. ರೈತರಿಗೆ ಇದರಿಂದಾಗಿ ಭಾರೀ ನಷ್ಟವಾಗುತ್ತಿದೆ'' ಎಂದರು.
ಇನ್ನು ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಮುಡಿಗರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಕೂಡಾ, ''ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಕೊಯ್ಲಿಗೆ ಬರುವಾಗ ಆನೆಗಳು ಬಂದು ದಾಳಿ ನಡೆಸಿ ಬೆಳೆ ನಾಶ ಮಾಡುತ್ತದೆ. ಇದಕ್ಕೆ ಪರಿಹಾರ ಕಂಡು ಕೊಳ್ಳಬೇಕಾಗಿದೆ'' ಎಂದು ಹೇಳಿದರು.
ಸ್ಪೀಕರ್ ಕಾಗೇರಿ ಮಾತನಾಡಿ, ''ಈಗ ಆನೆ ದಾಳಿಗಳು ವಿಪರೀತವಾಗಿವೆ. ಕೇಲವ ಆನೆ ಮಾತ್ರವಲ್ಲ ಹಂದಿಗಳು, ನವಿಲುಗಳು, ಕೋತಿಗಳು ಮತ್ತು ಇತರ ಪ್ರಾಣಿಗಳಿಂದಲೂ ಹಾನಿ ಉಂಟಾಗುತ್ತಿದೆ. ಹಾಗಾಗಿ ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ ನೀಡಬೇಕು'' ಎಂದು ಹೇಳಿದರು.