ಬೆಂಗಳೂರು, ಡಿ.11 (DaijiworldNews/PY): "ಗೋಹತ್ಯೆ ನಿಷೇಧ ಕಾಯ್ದೆಯಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಚರ್ಮೋದ್ಯಮದಲ್ಲಿ ಇರುವ ಮಂದಿ ತಮ್ಮ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕೆಂಡಾಕಾರಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಈ ಕಾಯ್ದೆ ಬಗ್ಗೆ ಈಗಾಗಲೇ ಹಲವಾರು ತಿದ್ದುಪಡಿ ತಂದಿದ್ದಾರೆ. ಗೋಹತ್ಯೆ ನಿಷೇಧದ ಬಗ್ಗೆ ರಾಜ್ಯದಲ್ಲಿ ಈಗಾಗಲೇ ಕಾನೂನುಗಳಿವೆ. ಯಾವ ಪ್ರಾಣಿಗಳನ್ನು ವಧೆ ಮಾಡಬಹುದು ಎಂದು 1964 ರ ಗೋಹತ್ಯೆ ನಿಷೇಧ ವಿಧೇಯಕದಲ್ಲಿ ತಿಳಿಸಿದ್ದಾರೆ" ಎಂದು ಹೇಳಿದರು.
"ಹಸುಗಳನ್ನು ಸಾಕಲು ರೈತರಿಗೆ ಸರ್ಕಾರ ಏನು ನೀಡಿದೆ?. 8 ಲಕ್ಷ ಪರಿಶಿಷ್ಟ ಜಾತಿಯ ಮಂದಿ ಪ್ರಾಣಿಗಳ ಚರ್ಮ ಸುಲಿಯುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಅವರು ಅದರಿಂದಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ಕಾಯ್ದೆ ಜಾರಿಗೆ ತಂದರೆ ಅವರು ಮುಂದೆ ತಮ್ಮ ಜೀವನವನ್ನು ಹೇಗೆ ಸಾಗಿಸುತ್ತಾರೆ?" ಎಂದ ಕೇಳಿದರು.
"ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾಂಸದ ರಫ್ತು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಆದರೆ, ಅದನ್ನು ನೀವು ನಿಯಂತ್ರಿಸಿದ್ದೀರಾ?. ದೇಶದಲ್ಲಿ ಅಧಿಕ ಮಂದಿ ಹೈನುಗಾರಿಕೆಯನ್ನು ಅವಲಂಭಿಸಿದ್ದಾರೆ. ಅಲ್ಲದೇ, ಚರ್ಮೋದ್ಯದಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ. ಇದೀಗ ಈ ಉದ್ಯಮ ನಿಂತರೆ ದೇಶಕ್ಕೆ ಸುಮಾರು 5.5 ಬಿಲಿಯನ್ ಡಾಲರ್ ನಷ್ಟವಾಗಲಿದೆ" ಎಂದರು.
"ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿ ಆ ವರದಿಯನ್ನು ಜನರ ಮುಂದಿಡಲಿ. ಆ ವಿಚಾರದ ಬಗ್ಗೆ ಚರ್ಚೆ ನಡೆಯಲಿ. ಸರ್ಕಾರವೇ ಅನುತ್ಪಾದಕ ಹಸುಗಳನ್ನು ಖರೀದಿ ಮಾಡಲಿ ರೈತರ ಮೇಲೆ ಏಕೆ ಹೊರೆ ಹಾಕುತ್ತೀರಾ?" ಎಂದು ಕೇಳಿದರು.