ಮೈಸೂರು, ಡಿ.11 (DaijiworldNews/PY): "ಹೆಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ. ಅವರೊಬ್ಬ ರೈತನ ಮಗ" ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶಂಸಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾದಂತಹ ರೈತರಪರವಾದ ಕಾರ್ಯಕ್ರಮವನ್ನು ನೀಡಿದ್ದಾರೆ. ಸರ್ಕಾರದಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ" ಎಂದು ಹೇಳಿದ್ದಾರೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು, ಗೋಹತ್ಯೆ ನಿಷೇಧ ಕಾಯ್ದೆ, ಪ್ರತಿಬಂಧಕ ಹಾಗೂ ಸಂರಕ್ಷಣಾ ವಿಧೇಯಕಕ್ಕೆ ಜೆಡಿಎಎಸ್ ಬೆಂಬಲದ ಬಗ್ಗೆ ಹಾಗೂ ಜೆಡಿಎಸ್ ನಿಲುವಿನ ವಿರುದ್ಧ ಹೆಚ್ಡಿಕೆ ವಿರುದ್ದ ವಾಗ್ದಾಳಿ ನಡೆಸಿದ್ದರು.
ಇದರ ಬೆನ್ನಲ್ಲೇ ಪ್ರತಾಪ್ ಸಿಂಹ ಹೆಚ್ಡಿಕೆ ಪರ ಬ್ಯಾಟಿಂಗ್ ಮಾಡಿದ್ದು, "ಹೆಚ್ಡಿಕೆ ಅವರಿಗೆ ರೈತರ ಹಾಗೂ ಗೋವಿನ ಬಗ್ಗೆ ತಿಳಿದಿದೆ. ಹಾಗಾಗಿ ಅವರು ಕಾಯ್ದೆಗೆ ಬೆಂಬಲ ನೀಡಿದ್ದಾರೆ. ಅವರು ಬಿಜೆಪಿ ಸರ್ಕಾರ ಮಾಡಿದ ಉತ್ತಮ ಕಾರ್ಯಕ್ಕೆ ಬೆಂಬಲ ನೀಡಿದ್ದಾರೆ. ರಾಜಕೀಯ ವಿಚಾರವಾಗಿ ಅವರನ್ನು ಟೀಕಿಸುವುದು ಸಣ್ಣತನ" ಎಂದಿದ್ದಾರೆ.