ಜಮ್ಮು, ಡಿ.11 (DaijiworldNews/MB) : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆಯು ನೀಡಿದ ಪ್ರತ್ಯುತ್ತರದಲ್ಲಿ ಐವರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಪೂಂಚ್ ಜಿಲ್ಲೆಯ ಎಲ್ಒಸಿಯ ಮಂಕೋಟೆ ಸೆಕ್ಟರ್ನಲ್ಲಿ ನಾಗರಿಕರ ಮೇಲೆ ಗುರಿಯಾಗಿಸಿಕೊಂಡು ಪಾಕಿಸ್ತಾನವು ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಗಳನ್ನು ಗುರುವಾರ ಪ್ರಾರಂಭಿಸಿತು. ಪಾಕಿಸ್ತಾನ ಸೇನೆಯು ನಾಗರಿಕರ ಸೌಲಭ್ಯಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರ ಪರಿಣಾಮ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯು ನಡೆಸಿದ ಪ್ರತಿದಾಳಿಯಲ್ಲಿ ಐವರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ, ಮೂವರು ಗಾಯಗೊಂಡಿದ್ದಾರೆ. ಪಾಕ್ನ ಹಲವಾರು ಬಂಕರ್ಗಳು ಸಹ ನಾಶವಾಗಿವೆ ಎಂದು ವರದಿಯಾಗಿದೆ.
ಉಭಯ ದೇಶಗಳ ಸೇನೆಯ ನಡುವೆ 2 ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿದೆ. 1999 ರಲ್ಲಿ ಉಭಯ ದೇಶಗಳು ಸಹಿ ಹಾಕಿದ ದ್ವಿಪಕ್ಷೀಯ ಕದನ ವಿರಾಮ ಒಪ್ಪಂದವನ್ನು ಈ ವರ್ಷದ ಆರಂಭದಿಂದಲೂ ಪಾಕಿಸ್ತಾನ ನಿರ್ಭಯದಿಂದ ಉಲ್ಲಂಘಿಸುತ್ತಿದೆ.
2020 ರ ಜನವರಿಯಿಂದ ಜಮ್ಮುಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ 3200 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಇದರ ಪರಿಣಾಮ 30 ನಾಗರಿಕರು ಸಾವನ್ನಪ್ಪಿದ್ದಾರೆ. ಹಾಗೆಯೇ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.