ಮುಂಬೈ,ಡಿ.11 (DaijiworldNews/HR): ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಂದು ವೇಳೆ ಮುಂದಿನ ದಿನಗಳಲ್ಲಿ ಯುಪಿಎ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಲ್ಲಿ ಆ ಸ್ಥಾನಕ್ಕೆ ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರ ಹೆಸರು ಪ್ರಸ್ತಾಪವಾದರೆ ನಾವು ಅದನ್ನು ಬೆಂಬಲಿಸುತ್ತೇವೆ ಎಂದು ಶಿವಸೇನಾ ಹೇಳಿದೆ.
ಈ ಕುರಿತು ಮಾತನಾಡಿದ ಶಿವಸೇನಾ ಮುಖಂಡ ಸಂಜಯ್ ರಾವತ್, "ಶರದ್ ಪವಾರ್ ಒಂದು ವೇಳೆ ಯುಪಿಎ ಅಧ್ಯಕ್ಷರಾದರೆ ನಮಗೆ ಸಂತೋಷ. ಆದರೆ ನಮಗೆ ತಿಳಿದು ಬಂದ ಮಾಹಿತಿ ಪ್ರಕಾರ ಅವರು ಈ ವಿಷಯವನ್ನು ವೈಯಕ್ತಿಕವಾಗಿ ತಳ್ಳಿಹಾಕಿದ್ದಾರೆ. ಯುಪಿಎ ಅಧ್ಯಕ್ಷ ಸ್ಥಾನದ ಪ್ರಸ್ತಾಪ ಅಧಿಕೃತವಾಗಿ ಬಂದಲ್ಲಿ ನಾವು ಅದನ್ನು ಬೆಂಬಲಿಸುತ್ತೇವೆ. ಈಗ ಕಾಂಗ್ರೆಸ್ ಪಕ್ಷ ತುಂಬಾ ದುರ್ಬಲವಾಗಿದೆ, ಈ ನಿಟ್ಟಿನಲ್ಲಿ ವಿಪಕ್ಷಗಳು ಒಗ್ಗೂಡಬೇಕಾದ ಅಗತ್ಯವಿದೆ" ಎಂದರು.
ಇನ್ನು ಪವಾರ್ ಅವರು ಆಳವಾದ ಅನುಭವ ಹೊಂದಿದ್ದು, ಅವರಿಗೆ ಜನರ ನಾಡಿ ಮಿಡಿತ ತಿಳಿದಿದೆ ಈ ನಿಟ್ಟಿನಲ್ಲಿ ಅವರು ದೇಶದ ಚುಕ್ಕಾಣಿ ಹಿಡಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕಾಗಿ ಶಿವಸೇನಾ ಅವರಿಗೆ ಶುಭ ಹಾರೈಸುತ್ತದೆ ಎಂದು ಹೇಳಿದ್ದಾರೆ.