ಬೆಳಗಾವಿ, ಡಿ.11 (DaijiworldNews/PY): ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕುಟುಂಬಸ್ಥರು ಭೇಟಿಯಾದರು.
ಈ ವೇಳೆ ಕುಟುಂಬಸ್ಥರು ತಾವು ತಂದಿದ್ದ ಆಹಾರವನ್ನು ನೀಡಿದರು. ಸುಮಾರು 31 ದಿನಗಳ ನಂತರ ಕುಟುಂಬಸ್ಥರನ್ನು ನೋಡಿದ ವಿನಯ ಕುಲಕರ್ಣಿ ಅವರು ಭಾವುಕರಾದರು.
ಡಿ.10ರಂದು ಸಂಜೆ 4 ರಿಂದ 5 ಗಂಟೆಯವರೆಗೆ ವಿನಯ ಕುಲಕರ್ಣಿ ಅವರನ್ನು ಅವರ ಕುಟುಂಬಸ್ಥರಿಗೆ ಭೇಟಿಯಾಗಲು ಧಾರವಾಡದ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಅವಕಾಶ ನೀಡಿತ್ತು. ಹಾಗಾಗಿ ವಿನಯ ಅವರನ್ನು ಭೇಟಿಯಾಗಲು ಅವರ ಕುಟುಂಬಸ್ಥರು ಆಗಮಿಸಿದ್ದು, ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಕರ್ಣಿ, ಪುತ್ರಿಯರಾದ ವೈಶಾಲಿ, ದೀಪಾಲಿ ಹಾಗೂ ಪುತ್ರ ಹೇಮಂತ ಭೇಟಿಯಾಗಿದ್ದಾರೆ.
ಧಾರವಾಡದಿಂದ ಸಂಜೆ 4 ಗಂಟೆಗೆ ಆಗಮಿಸಿದ ವಿನಯ ಕುಲಕರ್ಣಿ ಅವರ ಕುಟುಂಬಸ್ಥರು ಜೈಲಿನೊಳಗೆ ತೆರಳಿ ವಿನಯ ಅವರ ಯೋಗ ಕ್ಷೇಮ ವಿಚಾರಿಸಿ ಬಳಿಕ ವಾಪಾಸ್ಸಾಗಿದ್ದಾರೆ.