ಡೈಮಂಡ್ ಹಾರ್ಬರ್, ಡಿ.11 (DaijiworldNews/MB) : ಡೈಮಂಡ್ ಹಾರ್ಬರ್ಗೆ ತೆರಳುತ್ತಿದ್ದ ಸಂದರ್ಭ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಜೆ.ಪಿ.ನಡ್ಡಾ, ''ಪಶ್ಚಿಮ ಬಂಗಾಳ ಅಸಹಿಷ್ಣುತೆಯಿಂದ ಕೂಡಿದ ಗೂಂಡಾ ರಾಜ್ಯವಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೈಮಂಡ್ ಹಾರ್ಬರ್ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ''ರಾಜ್ಯದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿರುವುದು ಆತಂಕಕಾರಿ ವಿಚಾರ. ನಾನು ಬುಲೆಟ್ ಪ್ರೂಫ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ನನಗೆ ಯಾವುದೇ ಗಾಯವಾಗಿಲ್ಲ. ಆದರೆ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದೆ. ಬಿಜೆಪಿ ಮುಖಂಡರಿಗೆ ಈ ರೀತಿಯಾದರೆ ಇನ್ನು ಸಾಮಾನ್ಯ ಕಾರ್ಯಕರ್ತರ ಸ್ಥಿತಿ ಹೇಗಿರಬಹುದು ಎಂದು ನಾವು ಊಹಿಸಬಹುದು'' ಎಂದು ಹೇಳಿದರು.
''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಅದೋಗತಿಗೆ ತಲುಪಿದೆ. ನಾನು ಮಾ ದುರ್ಗಿಯ ಅನುಗ್ರಹದಿಂದಾಗಿ ಸುರಕ್ಷಿತವಾಗಿದ್ದೇನೆ. ರಾಜ್ಯದಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಎಷ್ಟು ಕಷ್ಟವಿದೆ ಎಂದು ನನಗೆ ಈಗ ಅರ್ಥವಾಗುತ್ತಿದೆ'' ಎಂದರು.
ಡೈಮಂಡ್ ಹಾರ್ಬರ್ಗೆ ತೆರಳುತ್ತಿದ್ದ ಸಂದರ್ಭ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ಪಡೆಯ ವಾಹನಗಳ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಜೆ.ಪಿ. ನಡ್ಡಾ ಅವರೊಂದಿಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯಾ ಅವರ ಕಾರಿನ ಮೇಲೂ ಕೂಡಾ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೈಲಾಶ್ ವಿಜಯವರ್ಗಿಯಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾಳಿಯಲ್ಲಿ ಕನಿಷ್ಠ ಸುಮಾರು 15 ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ.