ಬೆಂಗಳೂರು, ಡಿ.11 (DaijiworldNews/MB) : ''ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಐಟಿ ಕಂಪೆನಿಗಳು ಕಚೇರಿಯನ್ನು ಸದ್ಯಕ್ಕೆ ತೆರಯಬೇಕಾಗಿಲ್ಲ, ಮನೆಯಿಂದಲೇ ಕೆಲಸ ಮಾಡುವ ಈಗಿನ ವ್ಯವಸ್ಥೆ ಇನ್ನು ಕೆಲ ತಿಂಗಳುಗಳವರೆಗೆ ಮುಂದುವರಿಯಲಿದೆ'' ಎಂದು ಉಪ ಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಖಾತೆ ಉಸ್ತುವಾರಿ ಡಾ ಸಿ ಎನ್ ಅಶ್ವಥ್ ನಾರಾಯಣ್ ಹೇಳಿದರು.
''ಸದ್ಯಕ್ಕೆ ನಾವು ಐಟಿ ಕಂಪೆನಿಗಳಿಗೆ ಕಡ್ಡಾಯವಾಗಿ ಕಚೇರಿ ತೆರೆಯಲು ಒತ್ತಾಯಿಸಲು ಸಾಧ್ಯವಿಲ್ಲ. ಅದರ ಬದಲಾಗಿ ಉದ್ಯೋಗಿಗಳು ತಾವಿರುವಲ್ಲಿಂದಲೇ ಅಥವಾ ತಮ್ಮ ತಮ್ಮ ಮನೆಗಳಿಂದ ಕೆಲಸ ಮಾಡುವ ಆಯ್ಕೆಯನ್ನು ಇನ್ನು ಕೆಲ ತಿಂಗಳುಗಳವರೆಗೆ ಮುಂದುವರಿಸಲಾಗುವುದು'' ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಹೊಸಕೋಟೆಯ ಸ್ವತಂತ್ರ ಶಾಸಕ ಶರತ್ ಬಚ್ಚೇಗೌಡ, ''ಹೆಚ್ಚಿನ ಐಟಿ ಕಂಪೆನಿಗಳ ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಕೆಲಸದ ಉತ್ಪನ್ನದ ಮೇಲೆ ಅಧಿಕ ಪರಿಣಾಮ ಬೀರುತ್ತಲ್ಲಿದೆ. ಈ ಕಾರಣದಿಂದ ಐಟಿ-ಬಿಟಿ ಕಂಪೆನಿಗಳನ್ನು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು'' ಎಂದು ಆಗ್ರಹಿಸಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಐಟಿ ಬಿಟಿ ಖಾತೆ ಉಸ್ತುವಾರಿ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರು, ''ಕೊರೊನಾ ಕಡಿಮೆಯಾದ ನಂತರ ಪರಿಸ್ಥಿತಿ ನೋಡಿಕೊಂಡು ಐಟಿ-ಬಿಟಿ ಕಂಪೆನಿಗಳೇ ಕಚೇರಿಗಳನ್ನು ತೆರೆಯುತ್ತದೆ. ಪ್ರಸ್ತುತ ಉದ್ಯೋಗಿಗಳು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿಯಿಲ್ಲ. ಹಾಗೆಯೇ ಒಂದು ಬಾರಿ ಕಚೇರಿ ತೆರೆದರೆ ಇತರೆ ಸೇವೆಗಳು ಮೊದಲಿನಂತೆ ಸಹಜ ಸ್ಥಿತಿಗೆ ಮರಳುತ್ತದೆ. ಆದರೆ ರಾಜ್ಯದಲ್ಲಿನ್ನೂ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಆ ಕಾರಣ ಮನೆಯಲ್ಲಿಯೇ ಕೆಲಸ ಮಾಡುವುದು ಉತ್ತಮ'' ಎಂದು ತಿಳಿಸಿದರು.
ಕೊರೊನಾ ಕಾರಣದಿಂದಾಗಿ ಮಾರ್ಚ್ ತಿಂಗಳಿನಲ್ಲಿ ಲಾಕ್ಡೌನ್ ಆದ ಬಳಿಕ ಹೆಚ್ಚಿನ ಐಟಿ ಕಂಪೆನಿಗಳು ಮುಚ್ಚಿದ್ದು ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರವು ಡಿಸೆಂಬರ್ 31ರವರೆಗೆ ಐಟಿ ಮತ್ತು ಬಿಪಿಒ ಕಂಪೆನಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ನೀಡಿತ್ತು.