ಬೆಂಗಳೂರು, ಡಿ. 10 (DaijiworldNews/SM): ರಾಜ್ಯ ಸರಕಾರ ವಿಧಾನಸಭೆಯಲ್ಲಿ ಮಂಡಿಸಿ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ವಿಧಾನ ಪರಿಷತ್ ನಲ್ಲಿ ಹಿನ್ನಡೆಯಾಗಿದೆ.
ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಸದನವನ್ನು ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಯಿತು. ಇದರಿಂದಾಗಿ ಪರಿಷತ್ ನಲ್ಲಿ ವಿಧೇಯಕ ಅಂಗೀಕಾರಗೊಂಡಿಲ್ಲ. ವಿಧಾನಪರಿಷತ್ನಲ್ಲಿ ಗುರುವಾರ ಸಭಾಪತಿಗಳ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ತರುವಂತೆ ಬಿಜೆಪಿಯ ಆಯನೂರು ಮಂಜುನಾಥ್ ಪ್ರಸ್ತಾಪಿಸಿದರು. ಈ ನಡುವೆ ಕಲಾಪಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕೆಲವು ಸಚಿವರು ಗೈರು ಹಾಜರಾಗಿದ್ದರು. ಈ ಕಾರಣದಿಂದಾಗಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಶುಕ್ರವಾರ ಸದನದಲ್ಲಿ ಮಂಡಿಸುವುದಾಗಿ ತಿಳಿಸಿದರು. ಅದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವು ಅಜೆಂಡಾದಲ್ಲಿದ್ದು, ವಿಧೇಯಕವನ್ನು ಇಂದೇ ಮಂಡಿಸುವಂತೆ ಆಗ್ರಹಿಸಿದರು. ಶುಕ್ರವಾರದಿಂದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಕೆಲಸ ಮಾಡಬೇಕಿದ್ದು, ಸದನ ಇಂದೇ ಅಂತ್ಯಗೊಳಿಸುವಂತೆಯೂ ಸಭಾಪತಿಯವರನ್ನು ಒತ್ತಾಯಿಸಿದರು. ಇದರಿಂದಾಗಿ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.