ಬೆಂಗಳೂರು,ಡಿ.10 (DaijiworldNews/HR): ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮಸ್ಥರು ಕಾಣಿಕೆಯಾಗಿ ನೀಡಿದ್ದ ಬಂಗಾರದ ಕಿರೀಟವನ್ನು ಅವರು ವಿಧಾನಸೌಧದಲ್ಲಿ ಮುಖ್ಯಕಾರ್ಯದರ್ಶಿಯರ ಮೂಲಕ ಸರ್ಕಾರಕ್ಕೆ ಒಪ್ಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನನ್ನ ಹುಟ್ಟೂರು ಕಾರಜೋಳ ಗ್ರಾಮದ ಗ್ರಾಮಸ್ಥರು ನನ್ನ ಮೇಲಿನ ಪ್ರೀತಿ ಅಭಿಮಾನದಿಂದ ಗ್ರಾಮದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ 140 ಗ್ರಾಂ ಬಂಗಾರದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ" ಎಂದರು.
ಇನ್ನು ನಾನು ಶಾಸಕ, ಮಂತ್ರಿಯಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ಪೀತಿ, ಗೌರವದಿಂದ ಗ್ರಾಮಸ್ಥರೆಲ್ಲರೂ ಸೇರಿ ನನ್ನನ್ನು ಸನ್ಮಾನಿಸಿದ್ದಾರೆ ಆದರೆ ಈ ಸನ್ಮಾನ ನನಗೆ ಸಲ್ಲುವುದಲ್ಲ ಸರ್ಕಾರಕ್ಕೆ ಸಲ್ಲುತ್ತದೆ ಹಾಗಾಗಿ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಟಿ.ಎಂ.ವಿಜಯಬಾಸ್ಕರ್ ಅವರ ಮೂಲಕ ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.