ಪುಣೆ,ಡಿ.10 (DaijiworldNews/HR): ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ನೇತೃತ್ವದ ಭೂಮಾತಾ ಬ್ರಿಗೇಡ್ನ ಹಲವು ಸದಸ್ಯರು ಶಿರಡಿಗೆ ತೆರಳುತ್ತಿದ್ದ ವೇಳೆ ಅವರನ್ನುಅಹ್ಮದ್ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಿರಡಿಯ ಸಾಯಿಬಾಬಾ ಮಂದಿರದಲ್ಲಿ ಭಕ್ತರು ಸುಸಂಸ್ಕೃತ ರೀತಿಯಲ್ಲಿ ವಸ್ತ್ರ ಧರಿಸಬೇಕು ಎಂಬ ಒಕ್ಕಣೆ ಇರುವ ಫಲಕ ಅಳವಡಿಸಲಾಗಿದೆ. ಈ ಫಲಕವನ್ನು ತೆರವುಗೊಳಿಸುವ ಸಲುವಾಗಿ ತೃಪ್ತಿ ದೇಸಾಯಿ ನೇತೃತ್ವದಲ್ಲಿ ಭೂಮಾತಾ ಬ್ರಿಗೇಡ್ ಸದಸ್ಯರು ಶಿರಡಿಗೆ ತೆರಳುತ್ತಿದ್ದರು.
ಇನ್ನು ಈ ವಿವಾದಾತ್ಮಕ ಸಂದೇಶವನ್ನು ಹೊಂದಿರುವ ಫಲಕವನ್ನು ಕೂಡಲೇ ತೆಗೆದು ಹಾಕಬೇಕು. ತಪ್ಪಿದಲ್ಲಿ ಡಿ. 10ರಂದು ಸಂಘಟನೆಯ ಸದಸ್ಯರೊಂದಿಗೆ ತೆರಳಿ ಆ ಫಲಕವನ್ನು ತೆರವು ಮಾಡುವುದಾಗಿ ದೇಸಾಯಿ ಈ ಮೊದಲು ಎಚ್ಚರಿಕೆ ನೀಡಿದ್ದರು.
ದೇಸಾಯಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ನೋಟಿಸ್ ನೀಡಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಗೋವಿಂದ ಶಿಂಧೆ, ಡಿ.8ರಿಂದ 11ರ ಮಧ್ಯರಾತ್ರಿ 11ರ ವರೆಗೆ ಅಹ್ಮದ್ನಗರ ಜಿಲ್ಲೆಯ ಶಿರಡಿ ಪಟ್ಟಣವನ್ನು ಪ್ರವೇಶಿಸಬಾರದು ಎಂದು ಅವರಿಗೆ ಸೂಚಿಸಿದ್ದರು.