ಬೆಂಗಳೂರು, ಡಿ.10 (DaijiworldNews/HR): ವಿರೋಧ ಪಕ್ಷಗಳ ಪ್ರತಿರೋಧದ ನಡುವೆಯೂ ಇಂದು ವಿಧಾನಸಭೆ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಮಂಡನೆಯಾಗಿದ್ದು, ಅದರ ಸಾಧಕ ಬಾಧಕಗಳ ಕುರಿತು ಪಟ್ಟಿ ಮಾಡಿ ಸರ್ಕಾರ ಎದುರು ಕೆಲವೊಂದು ಸಮಸ್ಯೆಗಳನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪಟ್ಟಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ಮತಬ್ಯಾಂಕ್ನದ್ದೇ ಆದ್ಯತೆ. ಆದರೆ, ಹಾಲು ಉತ್ಪಾದನೆಯಲ್ಲಿ ತೊಡಗಿರುವ 24 ಲಕ್ಷ ರೈತ ಕುಟುಂಬಗಳಿಗೆ ಕಾಯ್ದೆ ಬಗ್ಗೆ ಇರಬಹುದಾದ ಆತಂಕಗಳನ್ನು ಜೆಡಿಎಸ್ ವಿಮರ್ಶಿಸಲು ಬಯಸುತ್ತದೆ. ಈ ಹಿಂದೆಯೇ ಹೇಳಿದಂತೆ ಜೆಡಿಎಸ್ ಒಂದು ಪಕ್ಷವಾಗಿ ಮಾತ್ರವಲ್ಲ, ರೈತ ಸಂಘವಾಗಿ ಕೆಲಸ ಮಾಡಲಿದೆ".
"ಸರ್ಕಾರ ಗೋಹತ್ಯೆ ನಿಷೇಧಿಸುವ ಕಾಯ್ದೆಯನ್ನು ರೂಪಿಸಿದೆ. ಆದರೆ, ಗೋಹತ್ಯೆ ನಿಷೇಧದ ಜೊತೆಗೆ ಗೋಮಾತೆಯನ್ನು ರಕ್ಷಿಸುವ, ಗೋಮಾತೆಯನ್ನೇ ನಂಬಿದ ರೈತರನ್ನು ರಕ್ಷಿಸುವ ಕಾನೂನಾಗಿಯೂ ಇವತ್ತಿನ ಈ ಕಾಯ್ದೆ ವರ್ತಿಸಬೇಕು ಎಂಬುದು ರೈತರ ಪ್ರತಿನಿಧಿಯಾದ ಜೆಡಿಎಸ್ನ ಒತ್ತಾಯ. ಈ ವಿಚಾರವಾಗಿ ಯಾರದ್ದೂ ತಕರಾರು ಇಲ್ಲ ಎಂದು ನಾವು ಭಾವಿಸುತ್ತೇವೆ".
"ನಾವೆಲ್ಲರೂ ಹಸುಗಳನ್ನು ಪೂಜಿಸುತ್ತೇವೆ. ಆದರೆ, ರೈತ ಮಾತ್ರ ಅದನ್ನು ಪೋಷಿಸುವ ಹೊಣೆ ಹೊತ್ತಿದ್ದಾನೆ. ಮತ್ತು, ಅದರ ಮೇಲೆಯೇ ಅವನ ಜೀವನ ನಿರ್ವಹಣೆಯೂ ಅವಲಂಬಿತವಾಗಿದೆ. ಗೋವಿನ ಪೋಷಣೆ ಎಂಬುದೇ ಆರ್ಥಿಕ ಹೊರೆಗೆ ಕಾರಣವಾದರೆ, ಆತನ ನೆರವಿಗೆ ನಿಲ್ಲುವವರು ಯಾರು? ಇದು ಸಾಮಾನ್ಯ ರೈತನಿಗೆ ಇರುವ ಪ್ರಶ್ನೆ. ಸರ್ಕಾರ ಇದಕ್ಕೆ ಪರಿಹಾರ ಹುಡುಕಬೇಕು".
"ರೈತ ತಾನು ಪೂಜಿಸುವ, ಪೋಷಿಸುವ, ಜೀವನಾಧಾರವನ್ನಾಗಿ ನಂಬಿರುವ ಗೋವು ಈ ಕಾಯ್ದೆ ಮೂಲಕ ಆತನಿಗೆ ಹೇಗೆ ಹೊರೆಯಾಗುತ್ತದೆ? ತಾನು ಸಾಕಿದ ಹಸು ಗಂಡು ಕರು ಹಾಕಿದಾಗ, ಹಸುವಿಗೆ ವಯಸ್ಸಾದಾಗ, ಕಾಯಿಲೆ ಬಿದ್ದಾಗ ಅದರ ನಿರ್ವಹಣೆ ಕಷ್ಟ. ಈಗಾಗಲೇ ಸಂಕಷ್ಟದಲ್ಲಿರುವ ರೈತನಿಗೆ ಈ ಹೊರೆ ಜೀವನ್ಮರಣದ ಪ್ರಶ್ನೆಯಾಗಲೂಬಹುದು ಎಂಬುದನ್ನು ಸರ್ಕಾರ ಮರೆತಂತಿದೆ".
"ರೈತರು ಈಗ ಹಾಲು ಉತ್ಪಾದನೆಗಾಗಿ ಪೋಷಿಸುತ್ತಿರುವ ಹಸುಗಳ ಗಂಡು ಕರುಗಳನ್ನು ಸಾಕುವುದು ಆರ್ಥಿಕವಾಗಿ ಹೊರೆ. ಅದು ಬೆಳೆದರೂ ಕೃಷಿ ಕಾರ್ಯಗಳಿಗೆ ಬಳಕೆಗೆ ಯೋಗ್ಯವಲ್ಲ. ಹೀಗಾದಾಗ ಹೈನುಗಾರಿಕೆಗೆ ಹೊಡೆತ ಬೀಳುತ್ತದೆ. ಕ್ರಮೇಣ ರೈತರು ಹೈನುಗಾರಿಕೆಯಿಂದಲೇ ವಿಮುಖವಾಗಬಹುದು. ಅದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ಗಮನಿಸಲೇಬೇಕು".
"ಸದ್ಯ ಸರ್ಕಾರ ತಂದಿರುವ ಕಾಯ್ದೆಯು ರೈತರು ಗಂಡು ಕರುಗಳನ್ನು, ವಯಸ್ಸಾದ ರಾಸುಗಳನ್ನು, ರೋಗಕ್ಕೀಡಾದ ಹಸುಗಳನ್ನು ಪೋಷಿಸಲೇಬೇಕಾದ ಷರತ್ತಿಗೆ ದೂಡುತ್ತದೆ. ಪ್ರಾಯೋಗಿಕವಲ್ಲದ ಷರತ್ತುಗಳ ಮೂಲಕ ಸರ್ಕಾರ ರೈತರ ಮೇಲೆ ಹೆಚ್ಚಿನ ಒತ್ತಡ ಹೇರಲು ಪ್ರಯತ್ನಿಸಿದರೆ, ರೈತರು ಹೈನುಗಾರಿಕೆಯಿಂದ ದೂರ ಸರಿಯಬಹುದು. ಆಗ ಹಾಲು ಉತ್ಪಾದನೆಗೆ ಹೊಡೆತ ಬೀಳಲಿದೆ".
"ಜಾನುವಾರುಗಳನ್ನು ಸೂಕ್ತ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಬಹುದು. ಇದಕ್ಕೆ ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಬೇಕು ಎಂದು ಹೇಳಲಾಗಿದೆ. ಚಿಕಿತ್ಸೆಗೇ ಈಗ ಪಶುವೈದ್ಯರ ಲಭ್ಯತೆ ಇಲ್ಲ. ಇನ್ನು ಪ್ರಮಾಣ ಪತ್ರಕ್ಕೆ ಲಭ್ಯರಾಗುವರೇ? ಪ್ರಮಾಣ ಪತ್ರ, ಅನುಮತಿ ಪಡೆಯುವ ಪ್ರಕ್ರಿಯೆ ದಂಧೆಯ ರೂಪ ತಾಳದೇ? ರೈತರ ಶೋಷಣೆ ನಡೆಯುವುದಿಲ್ಲವೇ"?.
ಇನ್ನು "ರೈತ ತಾನು ಪೋಷಿಸಿದ ಗೋವನ್ನು ಅಥವಾ ಯಾವುದೇ ಪ್ರಾಣಿಯನ್ನು ವಧೆಗಾಗಿ ಕೊಡಲು ಮನಃಪೂರ್ವಕವಾಗಿ ಒಪ್ಪಲಾರ. ಆದರೆ, ಅದು ಅವನಿಗೆ ಅನಿವಾರ್ಯ. ಗೋಹತ್ಯೆಯನ್ನು ನಿಷೇಧಿಸಬೇಕಿದ್ದರೆ, ಆತನ ಅನಿವಾರ್ಯತೆಯನ್ನು ನಾವು ಹೋಗಲಾಡಿಸಬೇಕು. ರೈತನಿಗೆ ಹೊರೆ ಸೃಷ್ಟಿಸುವ ಜಾನುವಾರುಗಳ ರಕ್ಷಣೆಯನ್ನು ಸರ್ಕಾರವೇ ಮಾಡಲಿ. ಗೋವಿನ ಜೊತೆಗೆ ರೈತನನ್ನೂ ರಕ್ಷಿಸಲಿ" ಎಂದು ಹೇಳಿದ್ದಾರೆ.