ನವದೆಹಲಿ, ಡಿ.10 (DaijiworldNews/PY): "ಇಂದು ಭಾರತದ ಇತಿಹಾಸದಲ್ಲಿ ಐತಿಹಾಸಿಕ ದಿನ. ಭಾರತದ ಜನತೆ ಸೇರಿ ಸಂಸತ್ತಿನ ಹೊಸ ಕಟ್ಟಡವನ್ನು ನಿರ್ಮಿಸುತ್ತೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ನೂತನ ಸಂಸತ್ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, "ಈ ಐತಿಹಾಸಿಕ ಕ್ಷಣವನ್ನು ಇಂದು ಕಣ್ತುಂಬಿಸಿಕೊಳ್ಳುತ್ತಿರುವ 130 ಕೋಟಿ ಭಾರತೀಯರಿಗೆ ಇಂದು ಹೆಮ್ಮೆಯ ದಿನವಾಗಿದೆ. ಈ ನೂತನ ಸಂಸತ್ತಿನ ಕಟ್ಟಡವು ಹೊಸ ಹಾಗೂ ಹಳೆಯದರ ಸಮ್ಮಿಲನಕ್ಕೆ ಒಂದು ಉದಾಹರಣೆಯಾಗಿದೆ" ಎಂದರು.
"ಹೊಸ ಸಂಸತ್ತು ಭವನ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. ಹಳೆಯ ಸಂಸತ್ತು ಕಟ್ಟಡದಲ್ಲಿ ದೇಶದ ಅವಶ್ಯಕತೆಗಳನ್ನು ಈಡೇರಿಸುವಂತ ಕಾರ್ಯ ಆಗಿದೆ. ಇನ್ನು ನೂತನವಾದ ಸಂಸತ್ತು ಕಟ್ಟಡದಲ್ಲಿ 21 ನೇ ಶತಮಾನದ ಭಾರತದ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲಿದೆ" ಎಂದು ಹೇಳಿದರು.
"ಪ್ರಜಾಪ್ರಭುತ್ವವು ಭಾರತೀಯರ ಜೀವನದ ಮೌಲ್ಯವಾಗಿದೆ. ಭಾರತದ ಪ್ರಜಾಪ್ರಭುತ್ವವು ಶತಮಾನಗಳ ಅನುಭವದ ಮುಖೇನ ಅಭಿವೃದ್ದ ಹೊಂದಿದ ವ್ಯವಸ್ಥೆ. ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಹೇಳುವಂತ ದಿನಗಳು ದೂರ ಇಲ್ಲ" ಎಂದರು.
"2014ರಲ್ಲಿ ನಾನು ಸಂಸದನಾಗಿ ಪ್ರಥಮ ಬಾರಿಗೆ ಸಂಸತ್ ಭವನಕ್ಕೆ ಪ್ರವೇಶ ಮಾಡಿದ ಗಳಿಗೆ ನನ್ನ ಪಾಲಿಗೆ ಅವಿಸ್ಮರಣೀಯವಾಗಿದೆ. ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತು ಭವನಕ್ಕೆ ಕಾಲಿಡುವ ಮುನ್ನ ನಾನು ಶಿರ ಬಾಗಿಸಿ ನಮಸ್ಕರಿಸಿ ವಂದನೆ ಸಲ್ಲಿಸಿದ್ದೆ" ಎಂದು ನೆನಪು ಮಾಡಿಕೊಂಡರು.