ಹೊಸದಿಲ್ಲಿ,ಡಿ.10 (DaijiworldNews/HR): ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ ಎಂದು ಕೇಂದ್ರ ಸಚಿವರಿಗೆ ಮಾಹಿತಿ ಇರುವುದೇ ಆಗಿದ್ದರೆ ತಕ್ಷಣವೇ ಆ ಎರಡು ದೇಶಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಿ ಎಂದು ಶಿವಸೇನೆಯ ರಾಜ್ಯಸಭಾ ಸದಸ್ಯ ಹಾಗೂ ಪಕ್ಷದ ಮುಖ್ಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಕೇಂದ್ರದ ಸಚಿವರಿಗೆ ರೈತರ ಪ್ರತಿಭಟನೆಯ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ ಎಂಬ ಮಾಹಿತಿ ಇರುವುದೇ ಆಗಿರೆ ರಕ್ಷಣಾ ಸಚಿವರು ತಕ್ಷಣವೇ ಚೀನಾ ಹಾಗೂ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು. ರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವರು ಹಾಗೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಈ ವಿಚಾರದ ಕುರಿತು ಗಂಭೀರ ಚರ್ಚೆ ನಡೆಸಬೇಕು" ಎಂದರು.
ಇನ್ನು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದಿಲ್ಲಿಯಲ್ಲಿ ತೀವ್ರ ಪ್ರತಿಭಟನೆಯ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ. ಸಿಎಎ ಕುರಿತು ಈ ಹಿಂದೆ ಮುಸ್ಲಿಮರನ್ನು ಪ್ರಚೋದಿಸಲಾಗಿತ್ತು ಎಂದು ಮಹಾರಾಷ್ಟದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಹೇಳಿದ್ದರು.