ಬೆಂಗಳೂರು, ಡಿ.10 (DaijiworldNews/PY): "ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ ಆರ್ಎಸ್ಎಸ್ನ ಹುನ್ನಾರ. ಯಾಂತ್ರೀಕೃತ ಕೃಷಿ ಅನಿವಾರ್ಯವಾಗಿರುವ ಕಾಲದಲ್ಲಿ ಪಶು ಸಂಗೋಪನೆ ರೈತರ ಪಾಲಿನ ಹೊರೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ ಆರ್ಎಸ್ಎಸ್ನ ಹುನ್ನಾರ. ಯಾಂತ್ರೀಕೃತ ಕೃಷಿ ಅನಿವಾರ್ಯವಾಗಿರುವ ಕಾಲದಲ್ಲಿ ಪಶು ಸಂಗೋಪನೆ ರೈತರ ಪಾಲಿನ ಹೊರೆ. ಇಂದು ದೇಶದಲ್ಲಿ ನಾಟಿ ದನಗಳನ್ನು ಸಾಕುವ ರೈತರೆಷ್ಟಿದ್ದಾರೆ?. ಹೊಸ ಕಾಯ್ದೆ ಪ್ರಕಾರ ಹಾಲಿಗಾಗಿ, ಉಳುಮೆಗಾಗಿ ಗೋಸಾಗಾಣಿಕೆ ಮಾಡಬೇಕೆಂದರೂ ಅನುಮತಿ ಬೇಕು. ಹೀಗಿರುವಾಗ ರೈತ ಗೋವು ಸಾಕುವುದ್ದೇಗೆ?" ಎಂದು ಪ್ರಶ್ನಿಸಿದ್ದಾರೆ.
"ಗೋ ಹತ್ಯೆ ನಿಷೇಧ ಕಾನೂನಿನಿಂದ ಬಿಡಾಡಿ ದನಗಳ ಸಂಖ್ಯೆ ಜಾಸ್ತಿಯಾಗಲಿವೆ. ಉ.ಪ್ರ.ದಲ್ಲಿ ರೈತರು ಹಸು ಸಾಕುವುದನ್ನು ನಿಲ್ಲಿಸಿದರಿಂದ 6 ವರ್ಷದಲ್ಲಿ 10 ಲಕ್ಷ ಗೋವುಗಳ ಸಂಖ್ಯೆ ಕಡಿಮೆಯಾಗಿದೆ. ವಿಪರ್ಯಾಸವೆಂದರೆ ಇದೇ ಅವಧಿಯಲ್ಲಿ 25ಸಾವಿರ ಕೋಟಿ ಗೋ ಮಾಂಸ ರಫ್ತಾಗಿದೆ. ಗೋ ಹತ್ಯೆ ತಡೆಯುವುದಾದರೆ ಗೋ ಮಾಂಸ ರಫ್ತಿಗೂ ನಿಷೇಧ ಹೇರಬೇಕಲ್ಲವೆ?" ಎಂದು ಕೇಳಿದ್ದಾರೆ.
"ಬಿಜೆಪಿ ಸರ್ಕಾರ ರೈತರಿಗೆ ಮಾರಕ ಕಾಯ್ದೆಗಳ ಮೂಲಕ ಹಂತ ಹಂತವಾಗಿ ವಿಶಪ್ರಾಸನ ಮಾಡುತ್ತಿದೆ. ಗೋಹತ್ಯೆ ನಿಷೇಧ ಕಾನೂನು ಕೂಡ ರೈತರ ಕತ್ತು ಹಿಸುಕುವುದು ಖಚಿತ. ನಾಟಿ ದನಗಳಂತೆ ಮುರ್ರಾ, ಜೆರ್ಸಿ ಹಾಗೂ ಮಿಶ್ರತಳಿಯ ದನಗಳಿಗೆ ರೋಗ ನಿರೋಧಕ ಶಕ್ತಿಯಿಲ್ಲ. 13 ವರ್ಷದೊಳಗಿನ ರೋಗಗ್ರಸ್ತ ದನಗಳನ್ನು ಬಿಜೆಪಿ ನಾಯಕರ ಮನೆ ಮುಂದೆ ಕಟ್ಟಿ ಹಾಕಿ ಬರಬೇಕೆ?" ಎಂದು ಪ್ರಶ್ನಿಸಿದ್ದಾರೆ.