ನವದೆಹಲಿ,ಡಿ.10 (DaijiworldNews/HR): ಚೀನಾವು ಗಡಿ ವಿಷಯವಾಗಿ ಪದೇ ಪದೇ ತಂಟೆ ತೆಗೆಯುತ್ತಿದ್ದು, ಆಕ್ರಮಣಕಾರಿ ಚಟುವಟಿಕೆಗಳನ್ನು ಕೈ ಬಿಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾಗೆ ಕಿವಿಮಾತು ಹೇಳಿದ್ದಾರೆ.
ಈ ಕುರಿತು ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ರಕ್ಷಣಾ ಸಚಿವರ ಸಭೆಯಲ್ಲಿ (ಎಡಿಎಂಎಂ-ಪ್ಲಸ್) ಮಾತನಾಡಿದರು ಅವರು, "ಚೀನಾವು ಪರಿಸ್ಥಿತಿಯನ್ನು ಮತ್ತಷ್ಟೂ ಸಂಕೀರ್ಣಗೊಳಿಸುವ ಚಟುವಟಿಕೆಗಳನ್ನು ಬಿಡಬೇಕು ಆಗ ಉಭಯ ದೇಶಗಳ ನಡುವೆ ಶಾಂತಿ ನೆಲೆಸಲು ಸಾಧ್ಯ ಎಂದರು".
ಆನ್ಲೈನ್ ಮೂಲಕ ನಡೆದ ಸಭೆಯಲ್ಲಿ ಚೀನಾ ರಕ್ಷಣಾ ಸಚಿವ ವೀ ಫೆಂಗ್ ಕೂಡ ಭಾಗಿಯಾಗಿದ್ದರು.
ಇನ್ನು "ಏಷ್ಯಾದ ಈ ಪ್ರದೇಶದಲ್ಲಿ ಸದ್ಯದ ಪರಿಸ್ಥಿತಿ ತೀವ್ರ ಒತ್ತಡದಲ್ಲಿದೆ. ಆದರೆ, ಪ್ರಾದೇಶಿಕ ಸಹಕಾರದ ಮೂಲಕ ಭದ್ರತೆ, ಬಹುತ್ವವನ್ನು ಕಾಪಾಡುವಲ್ಲಿ ಆಸಿಯಾನ್ ನೇತೃತ್ವದ ವಿವಿಧ ವೇದಿಕೆಗಳು ವಹಿಸುತ್ತಿರುವ ಪಾತ್ರ ಶ್ಲಾಘನೀಯ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.