ಬೆಂಗಳೂರು, ಡಿ.10 (DaijiworldNews/PY): "ಕಾಂಗ್ರೆಸ್ ಪಕ್ಷದಿಂದ ಪ್ರಜಾಪ್ರಭುತ್ವದ ಪಾಠವನ್ನು ಹೇಳಿಸಿಕೊಳ್ಳುವ ದುರ್ಗತಿ ನಮಗಿನ್ನೂ ಬಂದಿಲ್ಲ ಸಿದ್ದರಾಮಯ್ಯ ಅವರೇ. ಪ್ರತಿಯೊಂದಕ್ಕೂ ಸದನದ ಬಾವಿಗಳಿದು ಕಲಾಪಕ್ಕೆ ಅಡ್ಡಿಪಡಿಸುವ ನಿಮ್ಮ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ನೀತಿಯ ಬಗ್ಗೆ ರಾಜ್ಯದ ಜನತೆ ಗೊತ್ತಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಓಲೈಕೆ ರಾಜಕಾರಣದಿಂದಲೇ ಇವತ್ತು ದೇಶದಲ್ಲೆಡೆ ನಿಮ್ಮ ಪಕ್ಷವನ್ನು ಜನರು ಧೂಳೀಪಟ ಮಾಡಿದ್ದರೂ ನಿಮಗಿನ್ನೂ ಬುದ್ಧಿ ಬಂದಿಲ್ಲವೇ?.ದನ ಸಾಕಿದ್ದೇನೆ, ಸಗಣಿ ಬಾಚಿದ್ದೇನೆ ಎಂದು ಹೇಳಿಕೊಳ್ಳುವ ನೀವು ದನಗಳ್ಳತನಕ್ಕೆ, ಅಕ್ರಮ ಗೋ ಹತ್ಯೆಗೆ ಬೆಂಬಲ ನೀಡುವುದು ನೈತಿಕ ರಾಜಕಾರಣವೇ?" ಎಂದು ಪ್ರಶ್ನಿಸಿದ್ದಾರೆ.
"ನಮ್ಮದು ಮಹಾತ್ಮ ಗಾಂಧೀಜಿಯವರ ಪಕ್ಷ ಎನ್ನುತ್ತೀರಿ. ಅದೇ ಗಾಂಧೀಜಿಯವರು ನನಗೆ ಒಂದು ದಿನದ ಅಧಿಕಾರ ಸಿಕ್ಕರೂ ಗೋ ಹತ್ಯೆ ನಿಷೇಧ ಮಾಡುತ್ತೇನೆ ಎಂದಿದ್ದರು. ನಕಲಿ ಗಾಂಧೀಗಳ ನಾಯಕತ್ವದಲ್ಲಿರುವ ತಮಗೆ ಇದೆಲ್ಲ ಎಲ್ಲಿಂದ ನೆನಪಿಗೆ ಬರಬೇಕು?" ಎಂದು ಕೇಳಿದ್ದಾರೆ.
"ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸುತ್ತಿರುವುದು ಭಾರತೀಯ ಜನತಾ ಪಕ್ಷ. ಕಾಂಗ್ರೆಸ್ ಪಕ್ಷ ನಕಲಿ ಗಾಂಧಿಗಳ ಜೊತೆಗೂಡಿ ಮಹಾತ್ಮರ ಕನಸಿಗೆ ಅಡ್ಡಿಪಡಿಸುತ್ತಿದ್ದೀರಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರರ ಸಂವಿಧಾನದ ಆಶಯದಂತೆಯೇ ಗೋ ಹತ್ಯೆ ನಿಷೇಧ ಮಾಡಲು ಮುಂದಾದರೇ ಕಾಂಗ್ರೆಸ್ಸಿನ ವಿರೋಧ ಯಾತಕ್ಕಾಗಿ?" ಎಂದು ಪ್ರಶ್ನೆ ಮಾಡಿದ್ದಾರೆ.
"ಗೋ ಹತ್ಯೆ ನಿಷೇಧ ಎನ್ನುವುದು ನಮ್ಮ ಪಕ್ಷದ ಪ್ರಣಾಳಿಕೆಯ ಭಾಗ. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲೂ ಅದನ್ನು ಜಾರಿಗೆ ತಂದಿದ್ದೆವು. ತಮ್ಮ ಹಿಂದುತ್ವ ವಿರೋಧಿ ರಾಜಕಾರಣಕ್ಕೆ ಅದು ಬಲಿಯಾಗಿತ್ತು" ಎಂದಿದ್ದಾರೆ.
"ಬಡವರ ಮನೆಯ ಹಸುಗಳನ್ನು ಕದ್ದೊಯ್ಯುವ ದನಗಳ್ಳರ ಬೆಂಬಲಕ್ಕೆ ನಿಂತಿರುವ ನೀವೊಬ್ಬ ಬಡವರ ವಿರೋಧಿ. ಹಾಲು ಮಾರಿ ಜೀವನ ಕಟ್ಟಿಕೊಂಡ ಎಷ್ಟೋ ಮನೆಗಳು ಈ ದನಗಳ್ಳರಿಂದ ಹಾಳಾಗಿವೆ. ಗೋ ಹತ್ಯೆ ನಿಷೇಧವನ್ನು ವಿರೋಧಿಸುವ ನೀವು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಆ ಬಡವರ ಕಣ್ಣೀರು ಕಾಣುವುದಿಲ್ಲವೇ ಸಿದ್ದರಾಮಯ್ಯನವರೇ?" ಎಂದು ಕೇಳಿದ್ದಾರೆ.