ಬೆಂಗಳೂರು, ಡಿ.10 (DaijiworldNews/HR): ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯುವ ಬಗ್ಗೆ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಖಾಸಗಿ ಪಿಯು ಕಾಲೇಜು ನಿರ್ವಹಣೆಯ ಪ್ರತಿನಿಧಿಗಳೊಂದಿಗೆ ವಿಧಾನ ಸೌಧದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, "ಇತ್ತೀಚೆಗೆ, ಪದವಿ ಮತ್ತು ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕಾಂಗ ಪರಿಷತ್ ಸದಸ್ಯರು, ಶಾಲೆಗಳಿಂದ ಹೊರಗುಳಿದಿರುವ ಮಕ್ಕಳಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಶಾಲೆ ಮತ್ತು ಕಾಲೇಜುಗಳು ಕಾರ್ಯನಿರ್ವಹಿಸದ ಕಾರಣ ಪೋಷಕರು ಚಿಂತಿತರಾಗಿದ್ದು, ವಿದ್ಯಾರ್ಥಿಗಳ ಮುಂದಿನ ಅಧ್ಯಯನ ಹಿತದೃಷ್ಟಿಯಿಂದ ಶೀಘ್ರದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ್, "ಯಾವುದೇ ರಾಜ್ಯಗಳಲ್ಲಿ ಕೊರೊನಾ ಕಾರಣದಿಂದಾಗಿ ಶಾಲೆಗಳನ್ನು ಸಂಪೂರ್ಣವಾಗಿ ತೆರೆಯಲಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯ ತರಗತಿಗಳನ್ನು ತೆರೆಯಲಾಗಿದೆ. ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲೇ ಶಾಲೆ ತೆರೆಯುವ ಕುರಿತು ತೀರ್ಮಾನಕ್ಕೆ ಬರಲಾಗುವುದು" ಎಂದು ಹೇಳಿದರು.
ಶಾಸಕ ಅರುಣ್ ಶಹಾಪುರ ಅವರು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಶಾಲೆಗಳನ್ನು ನಿರಂತರವಾಗಿ ಮುಚ್ಚುವುದರಿಂದ ಗ್ರಾಮೀಣ ಜನರಿಗೆ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಗಳ ಕುರಿತು ಸಭೆಯಲ್ಲಿ ಗಮನಕ್ಕೆ ತಂದರು.
ಖಾಸಗಿ ಅನುದಾನರಹಿತ ಶಾಲೆಗಳ ನಿರ್ವಹಣಾ ಸಮಿತಿಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ, ಶಾರದಾ ಶಿಕ್ಷಣ ಸಂಸ್ಥೆಗಳ ಮಂಗಳೂರು ಅಧ್ಯಕ್ಷ ಪ್ರೊ.ಎಂ.ಬಿ.ಪೂರ್ಣಿಕ್, ಎಕ್ಸಪರ್ಟ್ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್, ಶಕ್ತಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಕೆ.ಸಿ.ನಾಯಕ್, ದಾವಣಗೆರೆ ವಿಶ್ವೇಶ್ವರಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀಧರ್, ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ವಸಂತ್ ಮಾಧವ್, ಹೆಬ್ರಿ ಎಸ್ಆರ್ ಪಿಯು ಕಾಲೇಜು ಅಧ್ಯಕ್ಷ ನಾಗರಾಜ ಶೆಟ್ಟಿ ಮತ್ತು ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ 20 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಪಿಯು ಶಿಕ್ಷಣ ನಿರ್ದೇಶಕ ಸ್ನೇಹಲ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.