ಮೈಸೂರು, ಡಿ.10 (DaijiworldNews/PY): "ರಾಜಕೀಯ ಪ್ರಕ್ರಿಯೆಗಳ ಆಚೆಗೆ ಸಾಮಾಜಿಕ ಬದ್ಧತೆ ಇಲ್ಲದಿದ್ದರೆ ಮಣ್ಣಿನ ಮಗನಾದರೂ ಅಷ್ಟೇ ಯಾರಾದರೂ ಅಷ್ಟೇ" ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಜಕೀಯ ಪ್ರಕ್ರಿಯೆಗಳ ಆಚೆಗೆ ಸಾಮಾಜಿಕ ಬದ್ಧತೆ ಇಲ್ಲದಿದ್ದರೆ ಮಣ್ಣಿನ ಮಗನಾದರೂ ಅಷ್ಟೇ ಯಾರಾದರೂ ಅಷ್ಟೇ. ಹೋರಾಟದ ಹಿನ್ನೆಲೆಯಿಂದ ಬಂದು ಸದನದ ಹೊರಗೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸದನದ ಒಳಗೆ ಕಾಯ್ದೆಯನ್ನು ಬೆಂಬಲಿಸುವ ಹೆಚ್.ಡಿ.ದೇವೇಗೌಡ ಅವರ ಈ ಕೆಲಸ ಸ್ವತಃ ಅವರೇ ತಲೆ ತಗ್ಗಿಸುವ ಸಂಗತಿಯಾಗಿದೆ. ಇವರನ್ನು ಕಾಲ ಎಂದಿಗೂ ಕ್ಷಮಿಸದು" ಎಂದಿದ್ದಾರೆ.
"ರಾಜಕೀಯ ಬದುಕಿನಲ್ಲಿ ಅಭಿವೃದ್ಧಿ ಎಂಬ ಶಬ್ದವನ್ನೇ ಆಡದ ಕೇಳದ ಸಂಸದೆ ಶೋಭಾ ಕರಂದ್ಲಾಜೆ ಅವರು ರೈತರನ್ನು ದೇಶದ್ರೋಹಿಗಳಿಗೆ ಹೋಲಿಸಿರುವುದು ಕೇಡುಗಾಲದ ಪರಮಾವಧಿ. ರೈತರ ಭವಿಷ್ಯವನ್ನು ಕತ್ತಲೆಗೆ ನೂಕಿ ಮತ್ತೆ ಅವರನ್ನೇ ದೇಶದ್ರೋಹಿ ಎನ್ನುತ್ತಿರುವ ಶೋಭಾ ಕರಂದ್ಲಾಜೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ" ಎಂದು ಹೇಳಿದ್ದಾರೆ.