ಬೆಂಗಳೂರು, ಡಿ.10 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಸರ್ಕಾರದ ಸಚಿವರನ್ನು ನಾನು ಮಧ್ಯರಾತ್ರಿ ಭೇಟಿ ಮಾಡಿ ಕೆಲಸ ಮಾಡಿಕೊಂಡಿದ್ದರೆ ಈ ವಿಚಾರವನ್ನು ಸಾಬೀತುಪಡಿಸಲಿ. ರಾಜಕಾರಣದಿಂದ ನಾನು ನಿವೃತ್ತಿಯಾಗುತ್ತೇನೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ.
ಸಿಎಂ ಬಿಎಸ್ವೈ ಅವರನ್ನು ಕೈ ನಾಯಕರು ಆಗಾಗ ಭೇಟಿಯಾಗುತ್ತಾರೆ ಎಂದು ಹೇಳಿರುವ ಹೆಚ್ಡಿಕೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕುಮಾರಸ್ವಾಮಿ ಅವರೂ ಕೂಡಾ ಸಿಎಂ ಆಗಿದ್ದವರು. ನಾನು ಸಿಎಂ ಬಿಎಸ್.ಯಡಿಯೂರಪ್ಪ ಅವರನ್ನು ಹಾಗೂ ಅವರ ಸರ್ಕಾರದ ಸಚಿವರನ್ನು ಭೇಟಿ ಮಾಡಿ ಕೆಲಸ ಮಾಡಿಕೊಂಡಿದ್ದರೆ ಕುಮಾರಸ್ವಾಮಿ ಅವರು ಇದನ್ನು ಸಾಬೀತು ಪಡಿಸಲಿ" ಎಂದಿದ್ದಾರೆ.
ಕಾಂಗ್ರೆಸ್ ಶಾಲಿನ ಬಗ್ಗೆ ಟೀಕೆ ಮಾಡಿದ್ದ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಜೆಡಿಎಸ್ ನಾಯಕರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದ್ದು, ಹಾಗೂ ಹೆಚ್ಡಿಕೆ ಅವರನ್ನು ಈ ರಾಜ್ಯದ ಸಿಎಂ ಆಗಿ ಮಾಡಿದ್ದು, ಇದೇ ಶಾಲು. ಇದೀಗ ಕುಮಾರಸ್ವಾಮಿ ಅವರು ಈ ಶಾಲಿಗೆ ಟೀಕೆ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಶಾಲಿನ ಬಗ್ಗೆ ಹಗುರವಾಗಿ ಮಾತನಾಡುವಾಗ ಅದನ್ನು ನೋಡಿಕೊಂಡು ನಾನು ಸುಮ್ಮನೆ ಕೂರಲಾರೆ" ಎಂದು ಹೇಳಿದ್ದಾರೆ.