ಕೋಲಾರ, ಡಿ. 09 (DaijiworldNews/SM): ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಭೂ ಸುಧಾರಣಾ ಕಾಯ್ದೆ ಪರಿಷತ್ ನಲ್ಲಿ ಪಾಸ್ ಆಗಿದೆ. ಇದೀಗ ಜೆಡಿಎಸ್ ಪಕ್ಷಕ್ಕೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ ಒಬ್ಬ ರೈತ ಮುಖಂಡರು ಕೂಡ ನನ್ನ ಪರ ಮಾತನಾಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ರೈತ ಮುಖಂಡರ ಧೋರಣೆ ಖಂಡನೀಯವಾಗಿದೆ ಎಂದಿದ್ದಾರೆ. ರೈತ ಮುಖಂಡರಿಂದ ನಾನು ಏನನ್ನು ಕಲಿಯಬೇಕಾಗಿಲ್ಲ. ಜೆಡಿಎಸ್ ಪಕ್ಷ ಎಂದೆಂದಿಗೂ ರೈತರ ಪರವಾಗಿರುವ ಪಕ್ಷವಾಗಿದೆ. ಮುಂದೆಯು ರೈತರ ಪರ ಇರುತ್ತದೆ. ಈ ವಿಚಾರದಲ್ಲಿ ಎಲ್ಲಿಗೆ ಬೇಕಾದರೂ ಬಹಿರಂಗ ಚರ್ಚೆಗೆ ಬರಲು ನಾನು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಭೂ ಸುದಾರಣೆ ಮಸೂದೆ ತಂದಾಗ ಮೊದಲಿಗೆ ತಾವು ದೇವೇಗೌಡರು ವಿರೋಧಿಸಿದ್ದೆವು. ಬಳಿಕ ಕಳೆದ ಅಧಿವೇಶನದಲ್ಲಿ ಕೆಲ ಬದಲಾವಣೆ ತರಲು ಸಲಹೆ ನೀಡಿದ್ದೇವು. ತಮ್ಮ ಸಲಹೆಯನ್ನು ಸರ್ಕಾರ ಪರಿಗಣಿಸಿ ಪರಿಷ್ಕರಣೆ ಮಾಡಿದೆ. ಹೀಗಾಗಿ ಮಸೂದೆ ಬೆಂಬಲಿಸಬೇಕಾಯಿತು ಎಂದು ಬಲವಾಗಿ ಸಮರ್ಥಿಸಿಕೊಂಡರು.