ನವದೆಹಲಿ, ಡಿ. 09 (DaijiworldNews/SM): ಕೃಷಿ ಸಂಬಂಧಿಸಿದ ಮೂರು ಮಸೂದೆಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಮಂಗಳವಾರದಂದು ರಾಷ್ಟ್ರ ವ್ಯಾಪಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಬುಧವಾರದಂದು ಕರಡು ಪ್ರಸ್ತಾವನೆಯನ್ನು ಕಳುಹಿಸಿದ್ದು, ರೈತ ಸಂಘಟನೆಗಳು ಕರಡು ಪ್ರಸ್ತಾವನೆ ತಿರಸ್ಕರಿಸಿವೆ. ಅಲ್ಲದೆ, ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿವೆ.
ಈ ಕುರಿತಂತೆ ಮಾತನಾಡಿರುವ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ಅವರು, ಕೇಂದ್ರ ಸರ್ಕಾರ ಕರಡು ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದ್ದು, ಡಿಸೆಂಬರ್ 12ರಂದು ದೆಹಲಿ-ಜೈಪುರ ಹೆದ್ದಾರಿಯನ್ನು ಬಂದ್ ಮಾಡುತ್ತೇವೆ. ಡಿಸೆಂಬರ್ 14 ರಂದು ಬಿಜೆಪಿ ಕಚೇರಿಗಳಿಗೆ ಘೆರಾವ್ ಹಾಕುತ್ತೇವೆ. ಕೇಂದ್ರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯಲಿವೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.