ನವದೆಹಲಿ, ಡಿ.09 (DaijiworldNews/MB) : ''ಈಗಲೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಚಲನವಲನದ ಮೇಲೆ ನಿರ್ಬಂಧ ಹೇರಲಾಗಿದೆ'' ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ ಆರೋಪಿಸಿದೆ.
''ಬಿಜೆಪಿಯ ದೆಹಲಿ ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಸಿಂಗು ಗಡಿಯಲ್ಲಿ ರೈತರನ್ನು ಭೇಟಿ ಮಾಡಿದಾಗಿನಿಂದ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಅವರ ನಿವಾಸದಿಂದ ಹೊರಬರಲು ಹಾಗೂ ನಿವಾಸಕ್ಕೆ ತೆರಳಲು ಯಾರಿಗೂ ಅನುಮತಿ ನೀಡುತ್ತಿಲ್ಲ'' ಎಂದು ಆರೋಪಿಸಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಭಾರತ್ ಬಂದ್ಗೆ ಕರೆ ನೀಡಿದ್ದ ದಿನವಾದ ಮಂಗಳವಾರ ಆಪ್ ಟ್ವೀಟ್ ಮಾಡಿತ್ತು.
ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ರಾಘವ್ ಛಡ್ಡಾ, ''ಈಗಲೂ ಕೇಜ್ರಿವಾಲ್ ಚಲನವಲನದ ಮೇಲೆ ನಿರ್ಬಂಧ ಹೇರಲಾಗಿದೆ. ಗೃಹ ಸಚಿವ ಅಮಿತ್ ಶಾ ಆಜ್ಞೆಯಂತೆ ಕೇಜ್ರಿವಾಲ್ ಅವರ ನಿವಾಸದ ಮುಖ್ಯದ್ವಾರವನ್ನು ಬಂದ್ ಮಾಡಲಾಗಿದೆ. ಅವರ ನಿವಾಸದ ಸುತ್ತಲೂ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣವಿದೆ'' ಎಂದು ದೂರಿದರು.
''ರೈತರನ್ನು ಜೈಲನ್ನಾಗಿಸಿದ ಕ್ರೀಡಾಂಗಣದಲ್ಲಿ ಬಂಧಿಸಲು ನಮ್ಮ ಸರ್ಕಾರ ಒಪ್ಪಿಗೆ ನೀಡಿಲ್ಲ. ಆ ಕಾರಣದಿಂದಾಗಿ ಈಗ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಸುತ್ತಲೂ ತುರ್ತು ಪರಿಸ್ಥಿತಿಯ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ'' ಎಂದು ಆರೋಪಿಸಿದರು.
ಆದರೆ ಈ ಆರೋಪವನ್ನು ಅಲ್ಲಗಳೆದಿರುವ ದೆಹಲಿ ಪೊಲೀಸರು, ''ಸಭೆಯೊಂದರಲ್ಲಿ ಪಾಲ್ಗೊಳ್ಳಲೆಂದು ಮುಖ್ಯಮಂತ್ರಿ ಕೇಜ್ರೀವಾಲ್ 11ಕ್ಕೆ ಮನೆಯಿಂದ ತೆರಳಿದ್ದಾರೆ'' ಎಂದು ಹೇಳಿದ್ಧಾರೆ.