ಭೋಪಾಲ್, ಡಿ.09 (DaijiworldNews/MB) : ಔತಣಕೂಟವೊಂದಕ್ಕೆ ತಯಾರಿಸಿದ್ದ ಆಹಾರವನ್ನು ಮುಟ್ಟಿದ ಎಂದು 25 ವರ್ಷದ ದಲಿತ ಯುವಕನನ್ನು ಮೇಲ್ಜಾತಿಯ ಇಬ್ಬರು ಥಳಿಸಿ ಹತ್ಯೆಗೈದ ಘಟನೆ ಮಧ್ಯ ಪ್ರದೇಶದ ಬುಂದೇಲ್ಖಂಡ್ ಜಿಲ್ಲೆಯ ಛತರ್ಪುರ್ ಎಂಬಲ್ಲಿನ ಕಿಶನ್ಪುರ್ ಗ್ರಾಮದಿಂದ ನಡೆದಿದೆ.
ಮೃತ ದಲಿತ ಯುವಕನನ್ನು ದೇವರಾಜ್ ಅನುರಾಗಿ ಎಂದು ಗುರುತಿಸಲಾಗಿದ್ದು ಥಳಿಸಿ ಹತ್ಯೆಗೈದವರು ಭೂರಾ ಸೋನಿ ಹಾಗೂ ಸಂತೋಷ್ ಪಾಲ್ ಎಂಬವರಾಗಿದ್ದಾರೆ.
ಆರೋಪಿಗಳಾದ ಭೂರಾ ಸೋನಿ ಹಾಗೂ ಸಂತೋಷ್ ಪಾಲ್ ಔತಣಕೂಟದ ಬಳಿಕ ಸ್ವಚ್ಛಗೊಳಿಸಲೆಂದು ದೇವರಾಜ್ ಅನುರಾಗಿ ಎಂಬ ದಲಿತ ಯುವಕನನ್ನು ಕರೆದಿದ್ದರು. ಆದರೆ ಆತ ಆಹಾರ ಸೇವಿಸುತ್ತಿದ್ದನ್ನು ನೋಡಿದ ಈ ಇಬ್ಬರು ಆರೋಪಿಗಳು ಯುವಕನಿಗೆ ಥಳಿಸಿ ಹತ್ಯೆಗೈದಿದ್ದಾರೆ.
ಇನ್ನು ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆಯೇ ಆರೋಪಿಗಳ ಪೈಕಿ ಭೂರಾ ಸೋನಿ ವಿರುದ್ದ ಈಗಾಗಲೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯವೂ ಪ್ರಕರಣ ದಾಖಲಾಗಿದೆ.