ಬೆಳಗಾವಿ, ಡಿ.09 (DaijiworldNews/PY): ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದ ಬಳಿಕ ತೆರವಾಗಿದ್ದ ಬೆಳಗಾವಿ ಲೋಕಸಭೆ ಕ್ರೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಇದರಲ್ಲಿ ಸ್ಪರ್ಧಿಸಲು ಕೈ ನಾಯಕ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಯಲ್ಲಿದೆ.
ಈ ವಿಚಾರವಾಗಿ ಚಿಂತಿಸಲು ಕಾಲಾವಕಾಶ ಬೇಕು ಎಂದು ಸತೀಶ್ ಜಾರಕಿಹೊಳಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಆಯ್ಕೆಯ ಸಲುವಾಗಿ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ನ 11 ಮಂದಿಯ ಹಿರಿಯ ಸದಸ್ಯರ ತಂಡ ಸಭೆ ಸೇರಿತ್ತು. ಸತೀಶ್ ಜಾರಕಿಹೊಳಿ ಅವರ ಅನುಭವ ಹಾಗೂ ಜನಪ್ರಿಯತೆಯಿಂದ ಅವರು ಎಲ್ಲರಿಗೂ ಕೂಡಾ ನೆಚ್ಚಿನ ವ್ಯಕ್ತಿಯಾಗಿದ್ದಾರೆ ಎಂಬುದಾಗಿ ಕೈ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಕಳೆದ ಮೂರು ಬಾರಿಯಿಂದಲೂ ಕೂಡಾ ಯಮನಕರಡಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ, ತಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಸಮರ್ಥರು. ಸತೀಶ್ ಅವರು 2000 ನೇ ಇಸವಿಯಲ್ಲಿ ಸಕ್ರಿಯವಾಗಿ ರಾಜಕೀಯ ಪ್ರವೇಶಿಸಿದ್ದು, ಬಳಿಕ ಎರಡು ಸಲ ಎಂಎಲ್ಸಿ ಹಾಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಸತೀಶ್ ಜಾರಕಿಹೊಳಿ ಅವರು ಬಿಜೆಪಿಯನ್ನು ಎದುರಿಸಲು ಸಮರ್ಥವಾದ ಅಭ್ಯರ್ಥಿ ಎಂದು ಸಮಿತಿ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.
ಬಿಜೆಪಿಗೆ ಈ ಬಾರಿ ಪ್ರಬಲವಾದ ಅಭ್ಯರ್ಥಿ ಇನ್ನೂ ಕೂಡಾ ದೊರಕದೇ ಇದ್ದ ಕಾರಣ ಇಂತಹ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ತೀರ್ಮಾನ ಮಾಡಿದೆ. ಈ ನಡುವೆ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರು ಕೂಡ ಕೇಳಿ ಬಂದಿದೆ ಎನ್ನಲಾಗಿದೆ. ಕೆಲವು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿ ಕೆಪಿಸಿಸಿಗೆ ಕಳುಹಿಸಿ ಕೊಡಲಿದೆ.