ಬೆಂಗಳೂರು, ಡಿ.09 (DaijiworldNews/PY): "ಅಧಿವೇಶನ ಮುಗಿದ ನಂತರ ರೈತರಿಗೆ ಕಾಯ್ದೆ ಬಗ್ಗೆ ಮಾಹಿತಿ ನೀಡುವ ಸಲುವಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಕಂದಾಯ ಸಚಿವರು, ಪಶುಸಂಗೋಪನೆ ಸಚಿವರು ಹಾಗೂ ಸಹಕಾರಿ ಸಚಿವರು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಒಂದು ಬಾರಿ ಪ್ರವಾಸ ಮಾಡಿದ್ದೇವೆ. ಆದರೆ, ಯಾವ ಕಡೆಯಲ್ಲೂ ಕೂಡಾ ರೈತರಿಂದ ಕಾಯ್ದೆ ಬಗ್ಗೆ ಅಪಸ್ವರ ಕೇಳಿಲ್ಲ. ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಕೂಡಾ ಬದಲಾವಣೆ ಮಾಡುವುದಿಲ್ಲ. ಈ ವಿಚಾರವಾಗಿ ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ" ಎಂದರು.
"ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಪಿಎಂಸಿ ರದ್ದು ಮಾಡಿ ಮುಕ್ತ ಮಾರುಕಟ್ಟೆ ಮಾಡುವ ವಿಚಾರದ ಬಗ್ಗೆ ಭರವಸೆ ನೀಡಿದ್ದರು. ಅವರು ಹೇಳಿರುವುದನ್ನು ನಮ್ಮ ಸರ್ಕಾರ ಮಾಡಿದೆ. ಆದರೆ, ಈ ಬಗ್ಗೆ ಕಾಂಗ್ರೆಸಿಗರು ರಾಜಕೀಯವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವನ್ನು ಹೇಳಿದ್ದೂ ಕಾಂಗ್ರೆಸ್, ಇದನ್ನು ವಿರೋಧಿಸುತ್ತಿರುವುದ ಕೂಡಾ ಕಾಂಗ್ರೆಸ್ ಎಂದರೆ ಏನರ್ಥ?. ರಾಜಕೀಯ ವಿಚಾರವಾಗಿ ಕಾಂಗ್ರೆಸ್ ಸುಖಾಸುಮ್ಮನೆ ಆರೋಪಿಸುವುದು ಸೂಕ್ತವಲ್ಲ. ಕಾಂಗ್ರೆಸ್ ಮೊದಲು ದ್ವಿಮುಖ ನಿಲುವನ್ನು ಬಿಟ್ಟು ಬಿಡಬೇಕು" ಎಂದು ತಿಳಿಸಿದರು.
"ರೈತರ ವಿಚಾರವಾಗಿ ಮಾತನಾಡುವ ರಾಹುಲ್ ಗಾಂಧಿ ಎಂದಿಗೂ ಕೂಡಾ ಹೊಲಕ್ಕೆ ಇಳಿದಿಲ್ಲ. ಇನ್ನು ಅವರಿಗೆ ಉಳುಮೆ, ಬಿತ್ತುವುದು ಎಂದರೆ ಏನು ಎಂದು ತಿಳಿದಿಲ್ಲ. ರಾಹುಲ್ ಅವರಿಗೆ ಇಂದಿಗೂ ಕೂಡಾ ಹಸುವಿನ ಹಾಲು ಎಲ್ಲಿಂದ ಬರುತ್ತದೆ ಎನ್ನುವುದೇ ತಿಳಿದಿಲ್ಲ. ಅಕ್ಕಿ ಎಲ್ಲಿಂದ ಬರುತ್ತದೆ ಎಂದು ಅವರಲ್ಲಿ ಕೇಳಿದರೆ ಭತ್ತದಿಂದ ಬರುತ್ತದೆ ಎಂದು ಹೇಳಲು ತಿಳಿದಿಲ್ಲ. ಹೈಫೈ ವಿದೇಶದಲ್ಲಿ ಓದಿಕೊಂಡು ಬಂದಿರುವ ಕಾರಣ ಅವರಿಗೆ ರೈತ ಪಡುತ್ತಿರುವ ಕಷ್ಟದ ಬಗ್ಗೆ ತಿಳಿದಿಲ್ಲ" ಎಂದರು.