ಭೋಪಾಲ್, ಡಿ.09 (DaijiworldNews/MB) : ಸಂಚರಿಸುತ್ತಿದ್ದ ಕಾರೊಂದು ಆಯತಪ್ಪಿ ರಸ್ತೆಬದಿಯ ಬಾವಿಗೆ ಬಿದ್ದು 6 ಮಂದಿ ದಾರುಣವಾಗಿ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಧ್ಯ ಪ್ರದೇಶದ ಛತರ್ಪುರ್ ಜಿಲ್ಲೆಯ ಮಹಾರಾಜಪುರ್ ಎಂಬಲ್ಲಿ ಕಳೆದ ರಾತ್ರಿ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಜ್ ಪುರ್ ಪೊಲೀಸ್ ಠಾಣೆಯ ಉಸ್ತುವಾರಿ ಜೆ ವೈ ಖಾನ್, ವಿವಾಹ ಸಮಾರಂಭವೊಂದಕ್ಕೆ ಹೋಗಿ ವಾಪಾಸ್ ಬರುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ರಾತ್ರಿಯಾದ ಕಾರಣ ಕಾರು ಚಲಾಯಿಸುತ್ತಿದ್ದವರಿಗೆ ನಿಯಂತ್ರಣ ತಪ್ಪಿ ಕಾರು ಬಾವಿಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕಾರಿನಲ್ಲಿ ಒಟ್ಟು 9 ಮಂದಿ ಇದ್ದರು. ಆರು ಮಂದಿ ಸಾವನ್ನಪ್ಪಿದ್ದಾರೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.