ಬೆಂಗಳೂರು, ಡಿ.09 (DaijiworldNews/MB) : ಕೇಂದ್ರವು ಇತ್ತೀಚೆಗೆ ಜಾರಿಗೆ ತಂದ 3 ಕೃಷಿ ಕಾನೂನುಗಳ ವಿರುದ್ಧ ರಾಜ್ಯದಲ್ಲಿ ಸಾವಿರಾರು ರೈತರು ಹಾಗೂ ರೈತ ಪರ ಸಂಘಟನೆಗಳು ಬೃಹತ್ ರ್ಯಾಲಿ ನಡೆಸಿದ್ದು ರಾಜ್ಯದ ನಗರ, ಗ್ರಾಮಗಳಲ್ಲಿ ಭಾರತ್ ಬಂದ್ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ರೈತರ ಭಾರತ್ ಬಂದ್ ಕರೆಗೆ ನಗರಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಾಮಾನ್ಯ ಜೀವನವು ಭಾಗಶಃ ಅಸ್ತವ್ಯಸ್ತಗೊಂಡಿತ್ತು. ಬೆಂಗಳೂರು, ಮೈಸೂರು, ಮಂಡ್ಯ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ರಾಯಚೂರು, ಬಲ್ಲಾರಿ ಮತ್ತು ಬೀದರ್ನಲ್ಲಿ ಮಾರುಕಟ್ಟೆಗಳು ಮತ್ತು ಎಪಿಎಂಸಿಗಳು ಮುಚ್ಚಿದ್ದವು.
ಬೆಂಗಳೂರಿನಲ್ಲಿ ನಗರದಾದ್ಯಂತ ಎಂದಿನಂತೆ ವ್ಯಾಪಾರ ನಡೆಯಿತು. ಬಂದ್ಗೆ ಬೆಂಬಲ ನೀಡಿ ವಿವಿಧ ಸಂಘಟನೆಗಳು ನಡೆಸಿದ ರ್ಯಾಲಿಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿ, "ಬಂದ್ ಯಶಸ್ವಿಯಾಗಿದೆ, ಯಾಕೆಂದರೆ ರಾಜ್ಯದಾದ್ಯಂತ ನಗರ ಮತ್ತು ಹಳ್ಳಿಗಳಲ್ಲಿ ನೂರಾರು ರೈತರು ಬೃಹತ್ ಮೆರವಣಿಗೆಗಳನ್ನು ನಡೆಸಿದ್ದಾರೆ. ಧರಣಿಗಳನ್ನು ನಡೆಸಿದ್ದಾರೆ. ರೈತ ವಿರೋಧಿ ಕಾನೂನುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು'' ಎಂದು ಹೇಳಿದ್ದಾರೆ.
ಪ್ರತಿಕೂಲ ಹವಾಮಾನ, ಕೊರೊನಾ ಆತಂಕ ಹಾಗೂ ಬಿಗಿಯಾದ ಭದ್ರತೆ ನಡುವೆಯೂ ರೈತರು, ಕಾರ್ಮಿಕರು ಮತ್ತು ಅವರ ಬೆಂಬಲಿಗರು ಗಂಟೆಗಟ್ಟಲೆ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಿ ವಾಹನಗಳನ್ನು ತಡೆಹಿಡಿದರು.
ಗೃಹ ಇಲಾಖೆಯ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಂದ್ ಶಾಂತಿಯುತವಾಗಿ ನಡೆದಿದೆ. ಕಲ್ಲು ಎಸೆಯುವ ಘಟನೆಗಳು, ಬಸ್ ಸಂಚಾರಕ್ಕೆ ತಡೆಯೊಡ್ಡುವುದು, ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚುವಂತೆ ಒತ್ತಡ ಹೇರುವ ಘಟನೆಗಳು ನಡೆದಿಲ್ಲ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಹಿತಕರ ಘಟನೆಗಳನ್ನು ತಡೆಗಟ್ಟಲು ರಾಜ್ಯದಾದ್ಯಂತ ನಗರಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿತ್ತು.
ತಮ್ಮ ಹೆಗಲ ಮೇಲೆ ಮತ್ತು ತಲೆಯ ಮೇಲೆ ಹಸಿರು ಟವೆಲ್ ಧರಿಸಿ, ಬಿಳಿ ಉಡುಪಿನಲ್ಲಿರುವ ನೂರಾರು ರೈತರು "ರೈತ ವಿರೋಧಿ ಕಾನೂನುಗಳನ್ನು" ಜಾರಿಗೆ ತಂದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಗಳು ಸಹ ಬಂದ್ಗೆ ತಮ್ಮ ಬೆಂಬಲವನ್ನು ನೀಡಿತು.
ಬಂದ್ ಮತ್ತು ಕೊರೊನಾ ಕಾರಣದಿಂದಾಗಿ ಪ್ರಯಾಣಿಕರು ಕಡಿಮೆ ಇದ್ದುದರಿಂದ ಬಸ್ಗಳು ಖಾಲಿಯಾಗಿಯೇ ಓಡಾಟ ನಡೆಸಬೇಕಾಯಿತು. ಅಗತ್ಯ ಸರಬರಾಜು ಮತ್ತು ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಿದ್ದರಿಂದ, ರಾಜ್ಯಾದ್ಯಂತ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಲಿಲ್ಲ.
ನಗರಗದಲ್ಲಿ ಬ್ಯಾಂಕುಗಳು, ಹೋಟೆಲ್ಗಳು ಮತ್ತು ಪೆಟ್ರೋಲ್ ಪಂಪ್ಗಳು ಸಹ ತೆರೆದಿದ್ದವು.
ಜೆಡಿಎಸ್, ಸಿಪಿಐ, ಸಿಪಿಎಂ, ಎಸ್ಡಿಪಿಐ, ಅಖಿಲ ಭಾರತ ಡಾ.ಬಿ ಆರ್ ಅಂಬೇಡ್ಕರ್ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಕ್ರಾಂತಿ ಸೇನಾ, ಕರ್ನಾಟಕ ರಾಜ್ಯ ರೈತ ಸಂಘ, ಎಐಟಿಯುಸಿ ಮತ್ತು ಇತರ ಸಂಸ್ಥೆಗಳ ನೂರಾರು ಸದಸ್ಯರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದರು.
ಟ್ರಾಕ್ಟರುಗಳು ಮತ್ತು ಎತ್ತಿನ ಗಾಡಿಗಳಲ್ಲಿ ಹಳ್ಳಿಗಳಿಂದ ನಗರಕ್ಕೆ ಹಲವಾರು ರೈತರು ಪ್ರತಿಭಟನೆ ಮತ್ತು ಧರಣಿ ಪ್ರದರ್ಶನಕ್ಕಾಗಿ ಬಂದರು.
ರೈತ, ಕಾರ್ಮಿಕ ಮತ್ತು ದಲಿತ ಗುಂಪುಗಳ ಒಕ್ಕೂಟವಾದ ರೈತರು ಮತ್ತು ಸದಸ್ಯರು 3 ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಮತ್ತು ಎಪಿಎಂಸಿ ಮಸೂದೆ, ಭೂ ಸುಧಾರಣಾ ಮಸೂದೆಯನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ವಿರೋಧ ಪಕ್ಷ ಕಾಂಗ್ರೆಸ್ ಬಂದ್ ಕರೆಗೆ ಬೆಂಬಲವನ್ನು ನೀಡುವುದಲ್ಲದೆ, ಇತರೆ ನಾಯಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಟೌನ್ ಹಾಲ್ನಿಂದ ನಗರದ ಫ್ರೀಡಂ ಪಾರ್ಕ್ವರೆಗೆ ರ್ಯಾಲಿ ನಡೆಸಿ ವಿಧಾನ ಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ ಪ್ರದರ್ಶನ ನಡೆಸಿದರು.
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳೊಂದಿಗೆ ರೈತರಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾವು ಹೋರಾಡುತ್ತೇವೆ. ಆ ಕಾಯ್ದೆಗಳು ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಉಪಕಾರಿಯಾಗಿದೆ" ಎಂದು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.