ಬೆಂಗಳೂರು, ಡಿ.09 (DaijiworldNews/PY): ಬಿಸಿಯೂಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದ್ದು, "ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಆಹಾರ ಧಾನ್ಯ ಒದಗಿಸಲು ಡಿ.5ರಂದೇ ಆದೇಶ ಹೊರಡಿಸಲಾಗಿದೆ" ಎಂದು ತಿಳಿಸಿದೆ.
"1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಐದು ತಿಂಗಳ ಲೆಕ್ಕಾಚಾರದಲ್ಲಿ ತಲಾ ಒಂದು ಕೆ.ಜಿ ಅಯೊಡೈಸ್ಡ್ ಉಪ್ಪು, ತೊಗರಿ ಬೇಳೆ ಹಾಗೂ ಅಡುಗೆ ಎಣ್ಣೆ ವಿತರಿಸಲಾಗುವುದು" ಎಂದು ಹೇಳಿದೆ.
ಕೊರೊನಾ ಹಿನ್ನೆಲೆ ಆರು ತಿಂಗಳುಗಳ ಕಾಲ ಈ ಯೋಜನೆಯಿಂದ ಮಕ್ಕಳು ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುವಂತೆ ಮುಖ್ಯ ನ್ಯಾ. ಎ.ಎಸ್.ಓಕಾ ಹಾಗೂ ನ್ಯಾ. ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.
ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪೀಠಕ್ಕೆ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು, "ಕರ್ನಾಟಕ ಆಹಾರ ನಿಗಮಕ್ಕೆ ಉಪ್ಪು, ಎಣ್ಣೆ ಹಾಗೂ ಬೇಳೆ ಸಂಗ್ರಹಣೆ ಮಾಡಲು ನಿರ್ದೇಶನ ನೀಡಲಾಗಿದೆ. ಶಾಲೆ ಪ್ರಾರಂಭವಾಗಿ ಪುನಃ ಅಡುಗೆ ವ್ಯವಸ್ಥೆಯು ಮತ್ತೆ ಜಾರಿಗೆ ಬರುವವರೆಗೂ ಈ ವ್ಯವಸ್ಥೆ ಮುಂದುವರಿಸಬೇಕು" ಎಂದು ಆಯುಕ್ತರಿಗೆ ತಿಳಿಸಲಾಗಿದೆ ಎಂದಿದ್ದಾರೆ.
"ಅಡುಗೆ ಎಣ್ಣೆ ಹಾಗೂ ಉಪ್ಪಿನ ಬದಲಾಗಿ ತೊಗರಿ ಬೇಳೆಯನ್ನು ಅಧಿಕ ಪ್ರಮಾಣದಲ್ಲಿ ವಿತರಣೆ ಮಾಡಲು ಸಾಧ್ಯವೇ ಎನ್ನುವುದನ್ನು ಪರಿಗಣಿಸಬೇಕು. ಆದೇಶದಲ್ಲಿರುವಂತೆ ವಸ್ತುಗಳ ವಿತರಣೆಯಾದರೆ ಮಧ್ಯಾಹ್ನದ ಬಿಸಿಯೂಟಕ್ಕೆ ಸಮನಾಗದು" ಎಂದು ಪೀಠ ತಿಳಿಸಿದೆ.