ಚೆನ್ನೈ, ಡಿ.09 (DaijiworldNews/PY): ತಮಿಳಿನ ಖ್ಯಾತ ಕಿರುತೆರೆ ನಟಿ, ವಿಜೆ ಚೈತ್ರಾ (28) ಅವರು ಡಿ.9ರ ಬುಧವಾರದಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚೆನ್ನೈನ ನಜರೀತ್ ಪೆಟೈ ಎಂಬಲ್ಲಿನ ಖಾಸಗಿ ಹೋಟೆಲ್ವೊಂದರಲ್ಲಿ ಚೈತ್ರಾ ಅವರ ಮೃತದೇಹ ಪತ್ತೆಯಾಗಿದೆ.
ವರದಿಗಳ ಪ್ರಕಾರ, ಚೈತ್ರಾ ಅವರು ಇವಿಪಿ ಸಿಟಿಯಲ್ಲಿ ಚಿತ್ರೀಕರಣ ಮುಗಿಸಿ ಡಿ.9ರ ಬುಧವಾರದಂದು 2.30ರ ವೇಳೆಗೆ ತಮ್ಮ ಹೋಟೆಲ್ ರೂಂಗೆ ವಾಪಾಸ್ಸಾಗಿದ್ದರು. ಚೈತ್ರಾ ಅವರು ತಮ್ಮ ಭಾವಿ ಪತಿ ಹೇಮಂತ್ ಅವರೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ
ತಮಿಳಿನ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಪಾಂಡಿಯನ್ ಸ್ಟೋರ್ಸ್ ಎಂಬ ಧಾರವಾಹಿಯಲ್ಲಿ ಚೈತ್ರಾ ಅವರು ನಟಿಸುತ್ತಿದ್ದು, ಬಹಳ ಜನಪ್ರಿಯತೆ ಗಳಿಸಿದ್ದರು. ಇತ್ತೀಚೆಗೆ ಚೈತ್ರಾ ಅವರ ನಿಶ್ಚಿತಾರ್ಥವು ಉದ್ಯಮಿ ಹೇಮಂತ್ ಅವರೊಂದಿಗೆ ನೆರವೇರಿತ್ತು ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ನಜ್ರತ್ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.