ನವದೆಹಲಿ, ಡಿ.09 (DaijiworldNews/MB) : ರೈತ ಸಂಘಟನೆಗಳ 13 ಪ್ರತಿನಿಧಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ರಾತ್ರಿ 8.30ರ ಸುಮಾರಿಗೆ ನಡೆಸಿದ ಅನೌಪಚಾರಿಕ ಮಾತುಕತೆಯೂ ಕೂಡಾ ವಿಫಲವಾಗಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಸುಮಾರು 13 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 12 ನೇ ದಿನವಾದ ಮಂಗಳವಾರ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿದ್ದು ದೇಶದಾದ್ಯಂತ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಗಳು ನಡೆದಿದೆ. ಏತನ್ಮಧ್ಯೆ ಅಮಿತ್ ಶಾ ಅವರನ್ನು ರೈತ ಮುಖಂಡರ ಗುಂಪು ಮಂಗಳವಾರ ಸಂಜೆ ಭೇಟಿ ಮಾಡಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈಟ್ ಮಂಗಳವಾರ ತಿಳಿಸಿದ್ದರು.
ಈ ಮಾತುಕತೆಯೂ ಕೂಡಾ ವಿಫಲವಾಗಿದ್ದು ಕಾಯ್ದೆಗಳಿಗೆ ತಿದ್ದುಪಡು ಮಾಡುವ ಬಗ್ಗೆ ಲಿಖಿತ ಭರವಸೆ ನೀಡಲಾಗುವುದು ಎಂದು ಮಾತ್ರ ಅಮಿತ್ ಶಾ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ರೈತ ಮುಖಂಡ ಹನ್ನನ್ ಮೊಲ್ಲಾ ಕಾಯ್ದೆಗಳಿಗೆ ತಿದ್ದುಪಡು ಮಾಡುವ ಬಗ್ಗೆ ಲಿಖಿತ ಭರವಸೆ ನೀಡಲಾಗುವುದು ಎಂದು ಶಾ ಹೇಳಿದ್ದಾರೆ. ಆದರೆ ನಮ್ಮ ಬೇಡಿಕೆ ಕಾಯ್ದೆಯನ್ನು ರದ್ದು ಮಾಡುವುದಾಗಿದೆ. ಅದರಲ್ಲಿ ನಾವು ಯಾವುದೇ ರಾಜಿಗೆ ಮುಂದಾಗಲಾರೆವು ಎಂದು ಹೇಳಿದ್ದಾರೆ.
ಹಾಗೆಯೇ ಈ ವೇಳೆಯೇ ಮುಂದಿನ ಹಂತದ ಮಾತುಕತೆಯ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೂಡಾ ತಿಳಿಸಿದ್ದಾರೆ.
ಬುಧವಾರ ಡಿಸೆಂಬರ್ 9 ರಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದ ಸಚಿವರ ಸಮಿತಿಯ ಜತೆಗೆ ರೈತ ಮುಖಂಡರುಗಳು 6 ನೇ ಸುತ್ತಿನ ಮಾತುಕತೆ ನಿಗದಿಯಾಗಿತ್ತು. ಈ ಮಾತುಕತೆ ನಿಗದಿಯಂತೆಯೇ ನಡೆಯಲಿದೆಯೇ ಅಥವಾ ಬೇರೆ ದಿನವನ್ನು ರೈತ ಮುಖಂಡರು ಚರ್ಚಿಸಿ ನಿಗದಿ ಮಾಡಲಿದ್ದಾರೆಯೇ ಎಂಬ ಕುರಿತು ಸ್ಪಷ್ಟ ಮಾಹಿತಿ ದೊರೆತಿಲ್ಲ.