ಬೆಂಗಳೂರು, ಡಿ. 08 (DaijiworldNews/SM): ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಭಾರತ್ ಬಂದ್ ನಡೆಸುತ್ತಿದ್ದಂತೆ ಇತ್ತ ಕರ್ನಾಟಕದ ವಿಧಾನ ಪರಿಷತ್ ನಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ.
ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಕಾಂಗ್ರೆಸ್ ನ ತೀವ್ರ ವಿರೋಧದ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ವಿಧಾನ ಪರಿಷತ್ ನಲ್ಲಿ ಪಾಸ್ ಮಾಡಲಾಗಿದೆ. ಕಳೆದ ಅಧಿವೇಶನದಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ ದೊರೆತಿರಲಿಲ್ಲ. ಈ ಕಾರಣದಿಂದಾಗಿ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರು ಮತ್ತೆ ಪರಿಷ್ಕೃತ ಮಸೂದೆ ಮಂಡಿಸಿದ್ದರು.
ಇತ್ತ ಮಸೂದೆಯ ಕುರಿತು ವಿಸ್ತೃತ ಚರ್ಚೆ ಆಗಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪಟ್ಟು ಹಿಡಿದಿದ್ದರು. ಇದೀಗ ಚರ್ಚೆಯ ನಂತರ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 31 ಮತ ಹಾಗೂ ವಿರುದ್ಧವಾಗಿ 21 ಮತಗಳು ಬಿದ್ದವು. ಜೆಡಿಎಸ್ ಬೆಂಬಲದೊಂದಿಗೆ ಮಸೂದೆ ಅಂಗೀಕರಿಸಲಾಗಿದೆ. ಇದರೊಂದಿಗೆ ಭೂಮಿ ಮಾರಲು ಹಾಗೂ ಖರೀದಿಸಲು ಇದ್ದ ದೊಡ್ಡ ಅಡೆಯೊಂದು ಹೋದಂತಾಗಿದೆ. ಇನ್ನು ಮುಂದೆ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಬಹುದಾಗಿದೆ.