ಏಳೂರು,ಡಿ. 08 (DaijiworldNews/HR): ಆಂಧ್ರಪ್ರದೇಶದ ಏಳೂರಿನಲ್ಲಿ ನಿಗೂಢವಾಗಿ ಕಾಣಿಸಿಕೊಂಡಿದ್ದ ಕಾಯಿಲೆಗೆ ಕುಡಿಯುವ ನೀರು ಹಾಗೂ ಹಾಲಿನಲ್ಲಿರುವ ಸೀಸ ಹಾಗೂ ನಿಕಲ್ ಅಂಶ ಕಾರಣ ಎಂದು ಪ್ರಾಥಮಿಕ ಪರಿಶೀಲನೆ ವೇಳೆ ತಿಳಿದು ಬಂದಿದೆ.
ಈ ನಿಗೂಢ ಕಾಯಿಲೆಯಿಂದಾಗಿ ಓರ್ವ ಮೃತಪಟ್ಟಿದ್ದು 500ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ.
ಇನ್ನು ಏಮ್ಸ್, ರಾಜ್ಯ ಹಾಗೂ ಕೇಂದ್ರದ ಇತರೆ ಸಂಸ್ಥೆಗಳ ತಜ್ಞರ ತಂಡವು ನಡೆಸಿದ ಪ್ರಾಥಮಿಕ ತನಿಖೆಯ ವರದಿಯನ್ನು ಆಧರಿಸಿ, ಆರೋಗ್ಯ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರಿಗೆ ಮಂಗಳವಾರ ವರದಿ ಸಲ್ಲಿಸಿದ್ದು, ಈ ನಿಗೂಢ ಕಾಯಿಲೆಗೆ ಸೀಸ ಹಾಗೂ ನಿಕಲ್ ಅಂಶವೇ ಕಾರಣ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಡಿ.5 ಶನಿವಾರ ರಾತ್ರಿಯಿಂದ ಜನರು ಏಕಾಏಕಿ ತಲೆಸುತ್ತಿ ಬೀಳುತ್ತಿದ್ದು, ಕೆಲ ನಿಮಿಷಗಳ ಕಾಲ ಮರೆವು, ವಾಂತಿ, ತೆಲನೋವು, ಬೆನ್ನುನೋವಿನಿಂದ ಬಳುತ್ತಿದ್ದಾರೆ. ರೋಗಿಗಳ ದೇಹದಲ್ಲಿರುವ ಲೋಹದ ಅಂಶದ ಪರಿಶೀಲನೆ ನಡೆಸಿ, ಚಿಕಿತ್ಸೆಯ ಮೇಲೆ ನಿಗಾವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.