ನವದೆಹಲಿ, ಡಿ.08 (DaijiworldNews/MB) : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರೈತ ಮುಖಂಡರ ಗುಂಪು ಮಂಗಳವಾರ ಸಂಜೆ ಭೇಟಿ ಮಾಡಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈಟ್ ಮಂಗಳವಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಪ್ರತಿಭಟನಾನಿರತ ರೈತರು ಕರೆ ನೀಡಿದ ಭಾರತ್ ಬಂದ್' ಮಧ್ಯೆಯೇ ಬಿಕೆಯು ಮುಖಂಡ ಈ ಘೋಷಣೆ ಮಾಡಿದ್ದಾರೆ. ಸರ್ಕಾರ ಅವರನ್ನು ಮಾತುಕತೆಗೆ ಆಹ್ವಾನಿಸಿದೆ ಎಂದು ವರದಿ ತಿಳಿಸಿದೆ.
ಮಧ್ಯ ದೆಹಲಿಯ ವಿಜ್ಞಾನ ಭವನದಲ್ಲಿ ಸರ್ಕಾರ ಹಾಗೂ ರೈತರ ನಡುವೆ ಬುಧವಾರ ನಡೆಯಲಿರುವ ಆರನೇ ಸುತ್ತಿನ ಮಾತುಕತೆಯೂ ಕೂಡಾ ಈ ಸಂದರ್ಭದಲ್ಲಿ ಗಮನಾರ್ಹವಾಗಿ ನಮ್ಮ ಮುಂದಿದೆ. ಮೊದಲು ಐದು ಸುತ್ತಿನ ಮಾತುಕತೆ ನಡೆಸಲಾಗಿದ್ದು ಎಲ್ಲಾ ಮಾತುಕತೆಯು ವಿಫಲವಾಗಿದೆ. ಅಮಿತ್ ಶಾರನ್ನು ಭೇಟಿಯಾಗಿ ಭೇಡಿಕೆಗಳನ್ನು ತಿಳಿಸುವುದು ರೈತರ ಬೇಡಿಕೆಗಳಲ್ಲಿ ಒಂದಾಗಿದೆ.
ನಿರ್ದಿಷ್ಟ ರೈತರ ಗುಂಪು ಅಮಿತ್ ಶಾರನ್ನು ಅವರ ನಿವಾಸದಲ್ಲಿ ಭೇಟಿಯಾಗಲಿದೆ ಎಂದು ತಿಳಿದುಬಂದಿದೆ.
"ನಾವು ಇಂದು ಸಂಜೆ 7 ಗಂಟೆಗೆ ಗೃಹ ಸಚಿವರೊಂದಿಗೆ ಸಭೆ ನಡೆಸಲಿದ್ದೇವೆ. ನಾವು ಈಗ ಸಿಂಗು ಗಡಿಗೆ ಹೋಗುತ್ತಿದ್ದೇವೆ. ಅಲ್ಲಿಂದ ನಾವು ಗೃಹ ಸಚಿವರನ್ನು ಭೇಟಿ ಮಾಡಲು ಹೋಗುತ್ತೇವೆ" ಎಂದು ಟಿಕೈಟ್ ಹೇಳಿದರು.