ನವದೆಹಲಿ, ಡಿ.08 (DaijiworldNews/MB) : ''ಕೋಟ್ಯಾಂತರ ಭಾರತೀಯರನ್ನು ಇನ್ನಷ್ಟು ಸಶಕ್ತರನ್ನಾಗಿಸಲು 5ಜಿ ಸಾಧನವನ್ನು ಸಮಯೋಚಿತವಾಗಿ ಪರಿಚಯಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಮೂರು ವರ್ಷಗಳಲ್ಲಿ ಹಳ್ಳಿಗಳು ಹೈಸ್ಪೀಡ್ ಇಂಟರ್ನೆಟ್ ಹೊಂದುತ್ತದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತೀಯ ದೂರ ಸಂಪರ್ಕ ಇಲಾಖೆ ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಆಯೋಜಿಸಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2020 ವರ್ಚುವಲ್ ಸಮಾರಂಭವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು.
''ಈ ಕೊರೊನಾ ಸಂದರ್ಭದಲ್ಲೂ ವಿಶ್ವವು ಎಂದಿನಂತೆ ಕಾರ್ಯನಿರ್ವಹಿಸಲು ನಿಮ್ಮ ಸಂಶೋಧನೆ ಮತ್ತು ಸಾಮರ್ಥ್ಯ ಕಾರಣ. ತಾಯಿ ಹಾಗೂ ಪುತ್ರ ಬೇರೆ ಬೇರೆ ಪ್ರದೇಶದಲ್ಲಿದ್ದರೂ ಅವರಿಗೆ ಒಬ್ಬರನ್ನು ಒಬ್ಬರು ಸಂಪರ್ಕ ಹೊಂದಲು ಈ ತಂತ್ರಜ್ಞಾನ ಬಹು ಸಹಕಾರಿಯಾಗಿದೆ'' ಎಂದು ಟೆಕ್ಕಿಗಳನ್ನು ಉದ್ದೇಶಿಸಿ ಹೇಳಿದರು.
''ಓರ್ವ ವಿದ್ಯಾರ್ಥಿಯು ತರಗತಿಗೆ ಹಾಜರಾಗದೆಯೇ ಆನ್ಲೈನ್ ಮೂಲಕವೇ ಶಿಕ್ಷಣ ಪಡೆಯುತ್ತಿರಲು ಕೂಡಾ ನೀವೇ ಕಾರಣೀಭೂತರು'' ಎಂದು ಹೇಳಿದರು.
''ನಾವು ಇಂದು ತಾಂತ್ರಿಕ ಉನ್ನತೀಕರಣದಿಂದಾಗಿ ಹ್ಯಾಂಡ್ಸೆಟ್ ಮತ್ತು ಗಾಡ್ಜೆಟ್ಗಳನ್ನು ಆಗಾಗ ಬದಲಿಸುವ ಸಂಸ್ಕೃತಿಯನ್ನು ಹೊಂದಿದ್ದೇವೆ. ಆದರೆ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಿಭಾಯಿಸುವಂತಹ ಹಾಗೂ ವೃತ್ತಾಕಾರದ ಆರ್ಥಿಕತೆಯನ್ನು ಸೃಷ್ಟಿಸುವ ಉದ್ಯಮವು ಕಾರ್ಯಪಡೆ ರಚಿಸಬಹುದೇ?'' ಎಂದು ಪ್ರಶ್ನಿಸಿದರು.