ಪುಣೆ, ಡಿ.08 (DaijiworldNews/HR): ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬೆಂಬಲ ಸೂಚಿಸಿ ಮಂಗಳವಾರ ದಿನವಿಡೀ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ರಾಷ್ಟ್ರವ್ಯಾಪಿ ಹೋರಾಟ ಹಾಗೂ ಭಾರತ್ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, "ಕೃಷಿಕರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ, ಈ ಆಂದೋಲನ ದೇಶವ್ಯಾಪಿ ನಡೆಯಬೇಕು. ಸರ್ಕಾರರಗಳು ಭರವಸೆಗಳನ್ನು ಮಾತ್ರ ನೀಡಿದವು. ಆದರೆ ರೈತರ ಬೇಡಿಕೆಗಳನ್ನು ಎಂದಿಗೂ ಈಡೇರಿಸಲಿಲ್ಲ" ಎಂದರು.
ಇನ್ನು "ರೈತರ ಹಿತಾಸಕ್ತಿಗಾಗಿ ಕೆಲಸ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತಹ ವಾತಾವರಣವನ್ನು ಈ ಆಂದೋಲನ ಸೃಷ್ಟಿಸಬೇಕು. ಆದರೆ ಹಿಂಸಾಚಾರಕ್ಕೆ ಯಾರೂ ಕೂಡ ಮುಂದಾಗಬಾರದು, ರೈತರು ಹೋರಾಟದ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ಸರಿಯಾದ ಸಮಯ" ಎಂದು ಹೇಳಿದ್ದಾರೆ.