ನವದೆಹಲಿ,ಡಿ.08 (DaijiworldNews/HR): ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಇಂದು ದೇಶದಾದ್ಯಂತ ಬಂದ್ಗೆ ಕರೆ ನೀಡಿದ್ದು, ಈ ಮಧ್ಯೆ ಕೃಷಿ ಸುಧಾರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಆಗ್ರಾ ಮೆಟ್ರೊ ರೈಲು ನಿರ್ಮಾಣ ಯೋಜನೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ಅಭಿವೃದ್ಧಿಗಾಗಿ ಕೆಲ ಸುಧಾರಣೆಗಳು ಅಗತ್ಯ, ಹಿಂದಿನ ಶತಮಾನದ ಕೆಲ ಕಾನೂನುಗಳು ಇದೀಗ ಹೊರೆಯಾಗಿ ಪರಿಣಮಿಸಿದ್ದು, ಹೊಸ ವ್ಯವಸ್ಥೆಗೆ ಮತ್ತು ಹೊಸ ಸೌಲಭ್ಯಗಳನ್ನು ನೀಡಲು ಸುಧಾರಣೆಗಳು ಅತ್ಯಗತ್ಯ"ಎಂದರು.
ಇನ್ನು "ನಮ್ಮ ಬಿಜೆಪಿಸರ್ಕಾರ ಸಮಗ್ರ ಸುಧಾರಣೆ ಮಾಡುತ್ತಿದ್ದು, ಹಿಂದೆ ಸುಧಾರಣೆಗಳು ಅಲ್ಪಪ್ರಮಾಣದಲ್ಲಿ ಇದ್ದವು ಅಥವಾ ಕೆಲವು ವಲಯ ಮತ್ತು ಇಲಾಖೆಗಳನ್ನು ಗಮನದಲ್ಲಿಟ್ಟುಕೊಂಡು ಆಗುತ್ತಿತ್ತು. ಹಿಂದೆ ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಇದ್ದ ಸಮಸ್ಯೆಯೆಂದರೆ ಹೊಸ ಯೋಜನೆಗಳನ್ನು ಘೋಷಿಸಿದಾಗ ಅದಕ್ಕೆ ಹಣ ಒದಗಿಸುವ ಬಗ್ಗೆ ಗಮನ ನೀಡುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಯೋಜನೆ ಅರಂಭದಲ್ಲೇ ಹಣದ ಲಭ್ಯತೆ ಖಾತರಿಪಡಿಸುತ್ತದೆ" ಎಂದು ಹೇಳಿದ್ದಾರೆ.