ಬೆಂಗಳೂರು, ಡಿ.08 (DaijiworldNews/MB) : ಕೇಂದ್ರದ ಮೂರು ಕೃಷಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ರೈತರು ನೀಡಿರುವ ಭಾರತ್ ಬಂದ್ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಕಡೆಗಳಲ್ಲಿ ರೈತ ಸಂಘಟನೆಗಳು ಮುಂಜಾನೆಯೇ ಪ್ರತಿಭಟನೆ ಆರಂಭಿಸಿದ್ದು ಕೆಲವೆಡೆ ಧರಣಿ ಕೂತಿದ್ದಾರೆ. ಇನ್ನು ಕೆಲವೆಡೆ ಸಾರಿಗೆ ಸಂಚಾರಕ್ಕೆ ಅಡೆತಡೆ ಉಂಟಾಗಿದೆ.
ಮೈಸೂರಿನಲ್ಲಿ ಮಂಗಳವಾರ ಬೆಳಿಗ್ಗೆ ರೈತ ಸಂಘಟನೆಗಳು ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದ್ದು ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರತಿಭಟನಕಾರರು ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದು ಬಸ್ ಸಂಚಾರ ಸ್ಥಗಿತವಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಬೆಳಗಾವಿಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ಗೆ ಬೆಂಬಲ ಸೂಚಿಸಿ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಚಹಾ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಹಾಗೆಯೇ ಹಳೆಯ ಟೈಯರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರು ಟೈಯರ್ಗಳನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಕಲಬುರಗಿಯಲ್ಲಿ ವಿವಿಧ ರೈತ ಸಂಘಟನಗೆ ಮುಖಂಡರು ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಾಗೆಯೇ ಕಲಬುರಗಿಯಿಂದ ಬೇರೆ ಜಿಲ್ಲೆಗೆ ತೆರಳುವ ಬಸ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ರಾಷ್ಟ್ರಪತಿ ಚೌಕದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಗೆ ಬ್ಯಾರಿಕೇಡ್ ಇರಿಸಿ ಬಂದ್ ಮಾಡಲಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆಗಳ ಎಲ್ಲ ಬಸ್ಗಳನ್ನು ನಿಲ್ದಾಣ ಹಾಗೂ ಡಿಪೊದಲ್ಲಿ ನಿಲ್ಲಿಸಲಾಗಿದೆ.
ಇನ್ನು ಮಂಗಳೂರಿನಲ್ಲಿ ಯಾವುದೇ ಬಂದ್ ಬಿಸಿ ತಟ್ಟಿಲ್ಲ ಜನರು ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಎಂದಿನಂತೆ ಬಸ್ ಸಂಚಾರವಿದೆ. ಬಂದರಿನಲ್ಲಿ ಶ್ರಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ತುಮಕೂರಿನಲ್ಲೂ ಬಂದ್ಗೆ ಉತ್ತಮ ಪ್ರತಿಕ್ರಿಯೆ ದೊರಕಿಲ್ಲ. ಎಂದಿನಂತೆ ಬಸ್, ವಾಹನಗಳು ಸಂಚಾರ ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಹಲವು ಅಂಗಡಿಗ, ಮಳಿಗೆಗಳು ಮುಚ್ಚಿದೆ. ಆದರೆ ಬಸ್ ಹಾಗೂ ಇತರೆ ವಾಹನಗಳ ಸಂಚಾರ ಎಂದಿನಂತಿದೆ. ಹಾಗೆಯೇ ಪ್ರತಿಭಟನಾಕಾರರು ಅಂಗಡಿ, ಮಳಿಗೆಗಳಿಗೆ ತೆರಳಿ ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ.
ಹೊಸಪೇಟೆಯಲ್ಲಿ ಭಾರತ್ ಬಂದ್ಗೆ ಉತ್ತಮವಾದ ಸ್ಪಂದನೆ ದೊರೆತಿದ್ದು ಹಲವು ಅಂಗಡಿ, ಮಳಿಗೆಗಳು ಬಂದ್ ಆಗಿದೆ. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿದ್ದು ಕೆಲವು ಬಸ್, ಆಟೋಗಳು ಮಾತ್ರ ಸಂಚರಿಸುತ್ತಿದೆ.
ಇನ್ನು ಚಾಮರಾಜನಗರದಲ್ಲಿ ವಿವಿಧ ರೈತ, ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಸ್ಥಗಿತವಾಗಿದೆ. ಕೆಲವು ಅಂಗಡಿಗಳು ತೆರೆದಿದ್ದು ಜನ ಸಂಚಾರ ವಿರಳವಾಗಿದೆ. ಬಳ್ಳಾರಿಯಲ್ಲಿ ಮಿಶ್ರ ಪ್ರತಿಕ್ರಿಯೆ ದೊರಕಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಬಸ್ಗಳಿಗೆ ಪ್ರಯಾಣಿಕರು ಇಲ್ಲದೆ ಕೆಲವು ಬಸ್ಗಳು ಸಂಚಾರ ಸ್ಥಗಿತಗೊಳಿಸಿದೆ.
ಕೊಪ್ಪಳದಲ್ಲಿ ರೈತ ಸಂಘಟನೆಗಳು ಟೈಯರ್ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಬಸ್, ವಾಹನಗಳ ಸಂಚಾರವಿದೆ. ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಯಾದಗಿತಿಯಲ್ಲೂ ಕೂಡಾ ರೈತ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದೆ.
ಚಿತ್ರದುರ್ಗದಲ್ಲಿ ಸಿಪಿಐ, ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಜನಜೀವನ ಸಹಜವಾಗಿದೆ. ರಾಮನಗರದಲ್ಲಿ ಬಂದ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲೂ ಬಸ್ಗಳು ಸಂಚರಿಸುತ್ತಿದೆ. ವಿಧಾನಸೌಧದ ಆವರಣದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಹಾಗೆಯೇ ಐಕ್ಯ ಹೋರಾಟ ಸಮಿತಿಯು ಪ್ರತಿಭಟನೆ ನಡೆಸಿದೆ.