ಬೆಂಗಳೂರು, ಡಿ.08 (DaijiworldNews/MB) : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯೊಂದಿಗೆ ಬಂದಿದ್ದ ಬಾಲಕಿಗೆ ಊಟ ಕೊಡಿಸುವುದಾಗಿ ಕರೆದೊಯ್ದು ಆಸ್ಪತ್ರೆಯೊಂದರ ವಾರ್ಡ್ ಬಾಯ್ ಹಾಗೂ ಆತನ ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ವಾರ್ಡ್ ಬಾಯ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್, ಆಸ್ಪತ್ರೆಯ ವಾರ್ಡ್ ಬಾಯ್ ಮನೋಜ್ ಹಾಗೂ ಆತನ ಸ್ನೇಹಿತರನ್ನು ನಾವು ಬಂಧಿಸಿದ್ದೇವೆ. ಪ್ರಸ್ತುತ ಅವರಿಗೆ ಕೌನ್ಸೆಲಿಂಗ್ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಾಲಕಿಯ ತಾಯಿಗೆ ಅನಾರೋಗ್ಯವಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು ಬಾಲಕಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದಳು. ಈ ಸಂದರ್ಭ ವಾರ್ಡ್ ಬಾಯ್ ಮನೋಜ್ನ ಪರಿಚಯವಾಗಿದ್ದು ಆತ ಊಟ, ತಿಂಡಿ ತಂದು ಕೊಡುವ ಮೂಲಕ ಸಹಾಯ ಮಾಡುತ್ತಿದ್ದ. ಗಲಭೆ ಹಿನ್ನೆಲೆ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಧಿಸಿದ ವೇಳೆ ಹೊಟೇಲ್ಗಳು ಬಂದ್ ಆಗಿದ್ದು ಈ ವೇಳೆ ಮನೋಜ್ ಊಟ ಕೊಡಿಸುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನ ಮೂವರು ಸ್ನೇಹಿತರೊಂದಿಗೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಬಗ್ಗೆ ತಾಯಿಗೆ ತಿಳಿಸಿದ್ದು ಈ ಪ್ರಕಾರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಸಿದ್ದಾರೆ.