ಚಿತ್ರದುರ್ಗ, ಡಿ. 07 (DaijiworldNews/HR): ಡಾ.ಬಿ.ಆರ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ರಾಷ್ಟ್ರದ ಧರ್ಮ ಗ್ರಂಥವಾಗಿದ್ದು, ಅದನ್ನು ಪ್ರತಿಯೊಬ್ಬರು ಮನೆಯಲ್ಲಿಇಟ್ಟುಕೊಂಡು ಅಧ್ಯಯನ ಮಾಡಬೇಕು ಎಂದು ಮುರುಘಾ ಮಠದ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.
ಈ ಕುರಿತು ಚಿತ್ರದುರ್ಗದ ಸರಕಾರಿ ಕಲಾ ಕಾಲೇಜು ಹಿಂಭಾಗದಲ್ಲಿನ ಯಂಗಮ್ಮಕಟ್ಟೆ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಅಂಬೇಡ್ಕರ್ ಮಹಾ ಪರಿ ನಿರ್ವಾಣದ ಪರಿವರ್ತನಾ ದಿನದ ಪ್ರಯುಕ್ತ ಆಯೋಜಿಸಿದ್ದ ಮೌಢ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಡಾ.ಬಿ.ಆರ್ ಅಂಬೇಡ್ಕರ್ ಅವರ ಎಲ್ಲಾ ಆದರ್ಶಗಳು ವೈಚಾರಿಕತೆಯ ರೂಢಿಗೆ ಸಹಕಾರಿಯಾಗಿವೆ. ಧರ್ಮದಲ್ಲಿ ಸಂಪ್ರದಾಯಗಳು ಸಹಜ, ಆದರೆ, ಗೊಡ್ಡು ಸಂಪ್ರದಾಯಗಳೇ ಧರ್ಮ ಆಗಬಾರದು ಎಂದರು".
ಅಂಬೇಡ್ಕರ್ ಅವರ ಸತತ ಅಧ್ಯಯನದಿಂದಾಗಿ ತಮ್ಮಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಂಡು ಜಗತ್ತಿಗೆ ಸಮಾನತೆಯ ಬಗ್ಗೆ ತಿಳಿಸಿದರು. ಅವರು ಸಮಾಜದಲ್ಲಿಅನುಭವಿಸಿದ್ದ ಅನೇಕ ಅವಮಾನಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಮಗ್ರ ವಿಚಾರಗಳಿಂದ ಸಂವಿಧಾನ ರಚಿಸಿದ್ದಾರೆ.
ಇನ್ನು ಶೋಷಿತ ಸಮುದಾಯದವರು ಸಂವಿಧಾನದ ಸವಲತ್ತುಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುವುದರ ಜತೆ ಇತರರನ್ನು ಬೆಳೆಸಬೇಕು ಎಂದು ಮುರುಘಾ ಶರಣರು ಸಲಹೆ ನೀಡಿದ್ದಾರೆ.