ಬೆಂಗಳೂರು, ಡಿ.0 7 (DaijiworldNews/MB) : ಸೋಮವಾರದಿಂದ ಡಿಸೆಂಬರ್ 15ರವರೆಗೆ ನಡೆಯಲಿರುವ ಚಳಿಗಾಲದ ವಿಧಾನಸಭಾ ಅಧಿವೇಶನ ಆರಂಭಗೊಂಡಿದ್ದು ಮೊದಲ ದಿನವೇ ಸದನದಲ್ಲಿ ಹಾಜರಾತಿ ಕೊರತೆ ಕಂಡು ಬಂದಿದೆ.
ಅಧಿವೇಶನ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚನೆ ಮಾಡಲಾಗಿದ್ದು ಮಾಜಿ ಸಚಿವ ಡಾ. ವೈ ನಾಗಪ್ಪ, ಜಸ್ವಂತ್ ಸಿಂಗ್, ಪತ್ರಕರ್ತ ರವಿ ಬೆಳೆಗರೆ, ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಸಹಕಾರಿ ಧುರೀಣ ವಿ.ಎಸ್ ಸೋಂದೆ, ಸಾಹಿತ್ಯ ವಿಮರ್ಶಕ ಜಿಎಸ್ ಆಮೂರ, ಕೆ. ಮಲ್ಲಪ್ಪ, ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್, ಮಾಜಿ ಶಾಸಕ ಬಸವಂತ್ ಐರೋಜಿ ಪಾಟೀಲ್ ಮೊದಲಾದವರಿಗೆ ಸಂತಾಪ ಸಲ್ಲಿಸಲಾಯಿತು.
ಕಲಾಪ ಆರಂಭವಾದ ಮೊದಲ ದಿನವೇ ಖುರ್ಚಿಗಳು ಖಾಲಿ ಖಾಲಿಯಾಗಿರುವುದು ಕಂಡು ಬಂದಿದೆ. ಹಲವು ಸಚಿವರು, ಶಾಸಕರು ಕಲಾಪಕ್ಕೆ ಗೈರು ಹಾಜರಾಗಿದ್ದಾರೆ.
ಆಡಳಿತರೂಢ ಬಿಜೆಪಿಯಿಂದ 11 ಸಚಿವರು ಮತ್ತು 26 ಶಾಸಕರು ಹಾಜರಿದ್ದು, ಕಾಂಗ್ರೆಸ್ ಪಕ್ಷದಿಂದ 25 ಶಾಸಕರು ಹಾಜರಿದ್ದರು. ಜೆಡಿಎಸ್ ಪಕ್ಷದಿಂದ ಕೇವಲ 5 ಮಂದಿ ಶಾಸಕರು ಮಾತ್ರ ಹಾಜರಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಗೈರು ಹಾಜರಾಗಿದ್ದಾರೆ.