ಬೆಂಗಳೂರು, ಡಿ.07 (DaijiworldNews/MB) : ''ರಾಜ್ಯ ಸರ್ಕಾರವು ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಈಗಾಗಲೇ ಇದು ಜಾರಿಯಲ್ಲಿದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಒಂದು ಸಮುದಾಯವನ್ನು ಗುರಿಯಾಗಿರಿಸಿ ಬಿಜೆಪಿಯವರು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮುಂದಾಗಿದ್ದು ಕಾಂಗ್ರೆಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ'' ಎಂದು ತಿಳಿಸಿದರು.
''ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ರೈತ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ರಾಜ್ಯಾದ್ಯಂತ ಕಾಂಗ್ರೆಸ್ ಬೆಂಬಲ ಸೂಚಿಸಲು ನಿರ್ಧರಿಸಿದೆ. ಬ್ಲಾಕ್ ಮಟ್ಟದಲ್ಲೇ ಪ್ರತಿಭಟನೆ ನಡೆಸಲು ಪಕ್ಷ ತೀರ್ಮಾನ ಮಾಡಿದೆ. ನಾವು ಯಾವುದೇ ಬಲವಂತವನ್ನು ಮಾಡದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ'' ಎಂದು ಹೇಳಿದರು.
''ಹಾಗೆಯೇ ಈಗಾಗಲೇ ಎಪಿಎಂಸಿ, ಕಾರ್ಮಿಕ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆ ರದ್ದುಪಡಿಸುವಂತೆ ಸಹಿ ಸಂಗ್ರಹ ಮಾಡಲಾಗಿದ್ದು ಸುಮಾರು 2.85 ಲಕ್ಷ ರೈತರು ಪೋಸ್ಟ್ ಕಾರ್ಡ್ ಮೂಲಕ ಬೆಂಬಲಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿಯವರು ಅದನ್ನು ರಾಷ್ಟ್ರಪತಿಗೆ ಕಳುಹಿಸಲಿದ್ದಾರೆ'' ಎಂದು ತಿಳಿಸಿದರು.
ಲವ್ ಜಿಹಾದ್ ಬಗ್ಗೆ ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ''ಅವರ ಹೇಳಿಕೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಯಾರೋ ತಲೆ ಕೆಟ್ಟವರು ನೀಡುವ ಹೇಳಿಕೆಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ'' ಎಂದು ಹೇಳಿದರು.